ವಿಶ್ವದ ಅತಿ ಶ್ರೀಮಂತ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ಟೆಸ್ಲಾ ಕಂಪನಿಯ ಎಲಾನ್ ಮಸ್ಕ್, ತಾವು ಮಾಡಿದ ಒಂದೇ ಒಂದು ಟ್ವೀಟ್ ಕಾರಣಕ್ಕೆ ಒಂದು ಲಕ್ಷ ಕೋಟಿ ರೂಪಾಯಿಗಳಿಗೂ ಅಧಿಕ ನಷ್ಟ ಮಾಡಿಕೊಂಡಿದ್ದಾರೆ. ಅಷ್ಟೇ ಅಲ್ಲ ಈ ನಷ್ಟದಿಂದಾಗಿ ವಿಶ್ವದ ಅತಿ ಶ್ರೀಮಂತ ಎಂಬ ಪಟ್ಟದಿಂದ ಕುಸಿತ ಕಂಡಿರುವ ಎಲಾನ್ ಮಸ್ಕ್ ಈಗ ಎರಡನೇ ಸ್ಥಾನದಲ್ಲಿದ್ದಾರೆ.
ಎಲಾನ್ ಮಸ್ಕ್ ಒಡೆತನದ ಕಂಪನಿ, ಬಿಟ್-ಕಾಯಿನ್ ನಲ್ಲಿ 1.5 ಶತಕೋಟಿ ಡಾಲರ್ ಹೂಡಿಕೆ ಮಾಡಿದ್ದು, ಕಳೆದ ಶನಿವಾರ ಎಲಾನ್ ಮಸ್ಕ್ ಬಿಟ್-ಕಾಯಿನ್ ಮತ್ತು ಪ್ರತಿಸ್ಪರ್ಧಿ ಈಥರ್ ನ ಬೆಲೆಗಳು ಏರಿಕೆಯಾಗುವಂತೆ ಕಾಣುತ್ತಿದೆ ಎಂದು ಟ್ವೀಟ್ ಮಾಡಿದ್ದರು. ಆದರೆ ಇದನ್ನು ಮಾರುಕಟ್ಟೆ ನಕರಾತ್ಮಕವಾಗಿ ಪರಿಗಣಿಸಿದ್ದು, ಇದರಿಂದಾಗಿ ಟೆಸ್ಲಾ ಕಂಪನಿಯ ಷೇರುಗಳ ಮೌಲ್ಯ ಕುಸಿತ ಕಂಡಿದೆ. ಹೀಗಾಗಿ ಎಲಾನ್ ಮಸ್ಕ್ 15.2 ಶತಕೋಟಿ ಡಾಲರ್ ನಷ್ಟ ಅನುಭವಿಸಿದ್ದಾರೆ. ಇದೀಗ 183.4 ಬಿಲಿಯನ್ ಡಾಲರ್ ಆಸ್ತಿ ಮೌಲ್ಯದೊಂದಿಗೆ ಎಲಾನ್ ಮಸ್ಕ್ ವಿಶ್ವದ ಎರಡನೇ ಅತಿ ಶ್ರೀಮಂತ ಎಂಬ ಹೆಗ್ಗಳಿಕೆ ಹೊಂದಿದ್ದಾರೆ.
186.3 ಬಿಲಿಯನ್ ಡಾಲರ್ ಆಸ್ತಿ ಮೌಲ್ಯದೊಂದಿಗೆ ಅಮೆಜಾನ್ ಸಂಸ್ಥಾಪಕ ಜೆಫ್ ಬೆಜೋಸ್ ವಿಶ್ವದ ಅತಿ ಸಿರಿವಂತರ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದು, ಮೈಕ್ರೋಸಾಫ್ಟ್ ನ ಬಿಲ್ ಗೇಟ್ಸ್ 135.3 ಬಿಲಿಯನ್ ಡಾಲರ್ ಆಸ್ತಿ ಮೌಲ್ಯದೊಂದಿಗೆ ಮೂರನೇ ಸ್ಥಾನದಲ್ಲಿದ್ದಾರೆ. ಬರ್ನಾರ್ಡ್ ಅರ್ನಾಲ್ಟ್ 117.6 ಬಿಲಿಯನ್ ಡಾಲರ್ ಆಸ್ತಿ ಮೌಲ್ಯದೊಂದಿಗೆ ನಾಲ್ಕನೇ ಸ್ಥಾನ ಹಾಗೂ ಫೇಸ್ಬುಕ್ ನ ಮಾರ್ಕ್ ಜುಕರ್ಬರ್ಗ್ 98.9 ಬಿಲಿಯನ್ ಡಾಲರ್ ಆಸ್ತಿ ಮೌಲ್ಯದೊಂದಿಗೆ ಐದನೇ ಸ್ಥಾನದಲ್ಲಿದ್ದಾರೆ.