
ವಿವಿಧ ವರ್ಣ ಹಾಗೂ ಸ್ವರೂಪದ ಬಾಟಲ್ ಗಳನ್ನು ತಯಾರಿಸುವ ಮೂಲಕ ಅಮೆರಿಕಾದ ಮದ್ಯ ಕಂಪನಿಗಳು ಸುರ ಪ್ರಿಯರನ್ನು ಸೆಳೆಯಲೆತ್ನಿಸುತ್ತವೆ. ಈಗ ಅಮೆರಿಕಾದ ಕಂಪನಿಯೊಂದು ಮಿಂಚಿನ ಮಾದರಿಯ ಟೆಕಿಲಾ ಬಾಟಲಿಗಳನ್ನು ತಯಾರು ಮಾಡುತ್ತಿದ್ದು, ಗಮನ ಸೆಳೆದಿದೆ.
ಟೆಸ್ಲಾ ಇನ್ಸ್ ಕಂಪನಿ ಟೆಸ್ಲಾ ಟೆಕಿಲಾ ಎಂಬ ಬಂಗಾರದ ಬಣ್ಣದ ಮಿಂಚಿನಾಕಾರದ ಟೆಕಿಲಾ ಬಾಟಲಿಯನ್ನು ಬಿಡುಗಡೆ ಮಾಡಿದೆ. ಈ ಕುರಿತು ಕಂಪನಿಯ ಸಿಇಒ ಇಲೋನ್ ಮಸ್ಕ್ ಟ್ವೀಟ್ ಮಾಡಿದ್ದಾರೆ. ಕಂಪನಿಯ ವೆಬ್ ಸೈಟ್ ಗೆ ಹೋಗಿ ನೋಡಿದರೆ, 250 ಡಾಲರ್ ಗೆ ಒಂದು ಬಾಟಲ್ ಎಂದು ಬೆಲೆ ನಮೂದಾಗಿದೆ. ಆದರೆ, ಈಗಾಗಲೇ ಎಲ್ಲ ವ್ಯಾಪಾರವಾಗಿವೆ (ಸೋಲ್ಡ್ ಔಟ್) ಎಂದು ತೋರಿಸುತ್ತದೆ.
2018 ರ ಏಪ್ರೀಲ್ ನಲ್ಲಿ ಮಸ್ಕ್ ತಮ್ಮ ಈ ಹೊಸ ಯೋಜನೆಯ ಕುರಿತು ಟ್ವೀಟ್ ಮಾಡಿದ್ದರು. ಆದರೆ, ಜನ ಅವರು ಏಪ್ರಿಲ್ ಫೂಲ್ ಮಾಡುತ್ತಿದ್ದಾರೆ ಎಂದುಕೊಂಡಿದ್ದರು. ಎರಡು ವರ್ಷದ ಬಳಿಕ ಮಸ್ಕ್ ತಮ್ಮ ಯೋಜನೆ ಜಾರಿಗೆ ತಂದಿದ್ದಾರೆ. ಆಗ ಅವರು ಮದ್ಯದ ಬಾಟಲಿಗೆ ಟೆಸ್ಲಾಕಿಲಾ ಎಂದು ಕರೆದಿದ್ದರು. ಆದರೆ, ಮೆಕ್ಸಿಕೊದ ಟೆಕಿಲಾ ರೆಗ್ಯುಲೇಟರಿ ಅಥಾರಿಟಿ ಆ ಹೆಸರಿಗೆ ಒಪ್ಪಿಗೆ ನೀಡದ ಕಾರಣ ಟೆಸ್ಲಾ ಟೆಕಿಲಾ ಎಂದು ಹೆಸರಿಡಲಾಗಿದೆ ಎನ್ನಲಾಗಿದೆ.
ದಕ್ಷಿಣ ಕ್ಯಾಲಿಫೋರ್ನಿಯಾ ಮೂಲದ ಸ್ಪಿರಿಟ್ ಬ್ರ್ಯಾಂಡ್ ನೊಸೊಟ್ರೊಸ್ ಟೆಕಿಲಾ ಸ್ಪಿರಿಟ್ ಉತ್ಪಾದಿಸುತ್ತಿದೆ. ಸದ್ಯಕ್ಕೆ ಮಿಂಚಿನ ಟೆಕಿಲಾ ಬ್ರ್ಯಾಂಡ್ ಅಮೆರಿಕಾದ ನ್ಯೂಯಾರ್ಕ್, ಕ್ಯಾಲಿಫೋರ್ನಿಯಾ, ವಾಷಿಂಗ್ಟನ್ ಸೇರಿ ಕೆಲವೇ ರಾಜ್ಯಗಳಲ್ಲಿ ಮಾತ್ರ ಪ್ರತಿ ಬಾಟಲಿಗೆ 69.420 ಡಾಲರ್ ಗೆ ಲಭ್ಯವಾಗಲಿದೆ.