ಎಲೆಕ್ಟ್ರಾನಿಕ್ ಚಿಪ್ ಬಳಸಿ ಪೆಟ್ರೋಲ್ ಬಂಕ್ ಗಳಲ್ಲಿ ಗ್ರಾಹಕರಿಗೆ ವಂಚನೆ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಈ ರೀತಿ ವಂಚಿಸಿದ ಹಲವು ಪೆಟ್ರೋಲ್ ಬಂಕ್ ಮಾಲೀಕರನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ.
ಹೈದರಾಬಾದ್, ತೆಲಂಗಾಣ, ಆಂಧ್ರ ಪ್ರದೇಶದ ಅನೇಕ ಬಂಕ್ ಗಳಲ್ಲಿ ಎಲೆಕ್ಟ್ರಾನಿಕ್ ಚಿಪ್ ಬಳಕೆ ಮಾಡಿ ಗ್ರಾಹಕರಿಗೆ ಕಡಿಮೆ ಪ್ರಮಾಣದ ಪೆಟ್ರೋಲ್ ಹಾಕುತ್ತಿರುವುದು ಬೆಳಕಿಗೆ ಬಂದಿದೆ. ರಾಜ್ಯದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ರಾಜ್ಯ ಪೆಟ್ರೋಲ್ ಡೀಲರುಗಳ ಫೆಡರೇಷನ್ ಎಚ್ಚರಿಕೆ ನೀಡಿದೆ.
ಪೆಟ್ರೋಲ್ ಬಂಕ್ ಗಳಲ್ಲಿ ವಂಚನೆ ನಡೆಯುತ್ತಿರುವ ಕುರಿತಾಗಿ ಅಖಿಲ ಭಾರತ ಮಟ್ಟದ ತುರ್ತು ಸಭೆ ನಡೆಸಲಾಗಿದ್ದು ಕೆಲವರು ಮಾಡುವ ವಂಚನೆಯಿಂದ ಇಡೀ ಪೆಟ್ರೋಲ್ ಡೀಲರ್ ಸಮುದಾಯಕ್ಕೆ ಕೆಟ್ಟ ಹೆಸರು ಬರುತ್ತದೆ. ಹಾಗಾಗಿ ಎಚ್ಚರಿಕೆ ವಹಿಸುವಂತೆ ಸೂಚನೆ ನೀಡಲಾಗಿದೆ.
ಪೆಟ್ರೋಲ್ ಹಾಕುವ ಯಂತ್ರದಲ್ಲಿ ಎಲೆಕ್ಟ್ರಾನಿಕ್ ಚಿಪ್ ಅಳವಡಿಸಲಾಗುತ್ತದೆ. ವಾಹನಗಳಿಗೆ ಪೆಟ್ರೋಲ್ ತುಂಬಿಸುವಾಗ ಡಿಜಿಟಲ್ ಮೀಟರ್ ನಲ್ಲಿ ಸರಿಯಾದ ಪ್ರಮಾಣವನ್ನು ತೋರಿಸುತ್ತದೆ. ಆದರೆ ಒಂದು ಲೀಟರ್ ಪೆಟ್ರೋಲ್ ನಲ್ಲಿ 50 ರಿಂದ 100 ಮಿ.ಲೀ. ಕಡಿಮೆ ಟ್ಯಾಂಕ್ ಗೆ ಬೀಳುತ್ತದೆ. ಇದರಿಂದ ಗ್ರಾಹಕರಿಗೆ ಮೋಸವಾಗುತ್ತದೆ.
ಆಂಧ್ರ ಮತ್ತು ತೆಲಂಗಾಣದಲ್ಲಿ 13 ಪೆಟ್ರೋಲ್ ಬಂಕ್ ಗಳಲ್ಲಿ ಎಲೆಕ್ಟ್ರಾನಿಕ್ ಚಿಪ್ ಅಳವಡಿಸಿ ವಂಚಿಸುತ್ತಿದ್ದ 30 ಮಂದಿಯನ್ನು ಬಂಧಿಸಲಾಗಿದೆ. ರಾಜ್ಯದಲ್ಲಿಯೂ ಕರ್ನಾಟಕ ರಾಜ್ಯ ಪೆಟ್ರೋಲ್ ಡೀಲರುಗಳ ಫೆಡರೇಷನ್ ವಂಚಕರ ವಿರುದ್ಧ ಕಠಿಣ ಕ್ರಮಕೈಗೊಳ್ಳುವಂತೆ ಒತ್ತಾಯಿಸಿದೆ. ಅಂಥವರಿಗೆ ಬೆಂಬಲ ನೀಡದಿರಲು ತೀರ್ಮಾನಿಸಲಾಗಿದೆ ಎಂದು ಹೇಳಲಾಗಿದೆ.