ಬೆಂಗಳೂರು: ಪೆಟ್ರೋಲ್, ಡೀಸೆಲ್, ದಿನಸಿ, ತರಕಾರಿ, ಅಡುಗೆ ಎಣ್ಣೆ, ಗ್ಯಾಸ್ , ಅಕ್ಕಿ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸಿದ ಜನತೆಗೆ ಜುಲೈ 1 ರಿಂದ ಮತ್ತೊಂದು ಬರೆ ಬೀಳಲಿದೆ.
ಜುಲೈ 1 ರಿಂದ ಪ್ರತಿ ತಿಂಗಳ ವಿದ್ಯುತ್ ದರ ಮತ್ತಷ್ಟು ಏರಿಕೆಯಾಗಲಿದೆ. ಮಾಸಿಕ 100 ಯೂನಿಟ್ ವಿದ್ಯುತ್ ಬಳಸುವ ಗ್ರಾಹಕರು ಹೆಚ್ಚುವರಿಯಾಗಿ 19 ರಿಂದ 31 ರೂಪಾಯಿ ಪಾವತಿಸಬೇಕಿದೆ. ವಿದ್ಯುತ್ ವಿತರಣಾ ಕಂಪನಿಗಳ ಮೇಲೆ ಈ ದರ ಪರಿಷ್ಕರಣೆ ಅವಲಂಬಿತವಾಗಿರುತ್ತದೆ.
ಕಲ್ಲಿದ್ದಲು ದರ ಏರಿಕೆಯಾಗಿದ್ದು, ಇದರ ವೆಚ್ಚವನ್ನು ಗ್ರಾಹಕರಿಂದ ಭರಿಸಲು ಅವಕಾಶ ಕಲ್ಪಿಸುವಂತೆ ಎಸ್ಕಾಂಗಳಿಂದ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಇಂಧನ ವೆಚ್ಚ ಹೊಂದಾಣಿಕೆ ಶುಲ್ಕ ಪ್ರತಿ ಯೂನಿಟ್ ಗೆ 38 ರಿಂದ 55 ರೂಪಾಯಿ ವಸೂಲಿ ಮಾಡಲು ಎಸ್ಕಾಂಗಳು ಕೋರಿವೆ.
ಈ ಪ್ರಸ್ತಾವನೆಗೆ ವಿದ್ಯುತ್ ನಿಯಂತ್ರಣ ಆಯೋಗ ಅನುಮೋದನೆ ನೀಡಿದ್ದರೂ, ಎಸ್ಕಾಂಗಳು ನಿಗದಿಪಡಿಸಿದ್ದ ದುಬಾರಿ ದರ ಕಡಿತಗೊಳಿಸಲಾಗಿದೆ. ಗ್ರಾಹಕರಿಗೆ ದುಬಾರಿ ದರದಿಂದ ಹೊರೆಯಾಗುವ ಕಾರಣಕ್ಕೆ ಎಸ್ಕಾಂಗಳು ನಿಗದಿಪಡಿಸಿದ ದರ ಕಡಿತಗೊಳಿಸಲಾಗಿದೆ.
2022ರ ಜುಲೈ 1 ರಿಂದ ಡಿಸೆಂಬರ್ 31 ರವರೆಗೆ ಆರು ತಿಂಗಳ ಅವಧಿಗೆ ಇಂಧನ ವೆಚ್ಚ ಹೊಂದಾಣಿಕೆ ಶುಲ್ಕ ವಸೂಲು ಮಾಡುವ ಅವಕಾಶವನ್ನು ಕಲ್ಪಿಸಲಾಗಿದೆ. ಈ ಹಿನ್ನೆಲೆಯಲ್ಲಿ ಜುಲೈ 1 ರಿಂದ ಪ್ರತಿ ತಿಂಗಳ ವಿದ್ಯುತ್ ದರ ಮತ್ತಷ್ಟು ಹೆಚ್ಚಳವಾಗಲಿದೆ.
ಕಲ್ಲಿದ್ದಲು ಪೂರೈಕೆಯಲ್ಲಿ ಸಮಸ್ಯೆಯಾಗಿದ್ದರಿಂದ ಈ ಕ್ರಮ ಕೈಗೊಂಡಿದ್ದು, ಮತ್ತೆ ದರಗಳು ಯಥಾಸ್ಥಿತಿಗೆ ಬರಲಿವೆ ಎಂದು ಹೇಳಲಾಗಿದೆ.