ಬೆಂಗಳೂರು: ಗ್ರಾಮೀಣ ಪ್ರದೇಶ ಮತ್ತು ರೈತರ ಕೃಷಿ ಪಂಪ್ಸೆಟ್ ಗಳಿಗೆ ಪ್ರೀಪೇಯ್ಡ್ ಮೀಟರ್ ಅಳವಡಿಕೆ ಹಾಗೂ ಇಂಧನ ಇಲಾಖೆ ಖಾಸಗೀಕರಣ ಮಾಡಲಾಗುವುದು ಎಂದು ಹೇಳಲಾಗಿತ್ತಾದರೂ, ಇಂಧನ ಸಚಿವ ವಿ. ಸುನಿಲ್ ಕುಮಾರ್ ಇದನ್ನು ಅಲ್ಲಗಳೆದಿದ್ದಾರೆ.
ವಿಧಾನಸಭೆಯಲ್ಲಿ ಮಾತನಾಡಿದ ಅವರು, ರೈತರ ಕೃಷಿ ಪಂಪ್ಸೆಟ್ ಗಳಿಗೆ ಪ್ರೀಪೇಯ್ಡ್ ಮೀಟರ್ ಅಳವಡಿಸುವುದಿಲ್ಲ. ಗ್ರಾಮೀಣ ಪ್ರದೇಶದಲ್ಲಿಯೂ ಪ್ರೀಪೇಯ್ಡ್ ಮೀಟರ್ ಅಳವಡಿಕೆ ಮಾಡುವುದಿಲ್ಲ. ಇಲಾಖೆ ಖಾಸಗೀಕರಣದ ಪ್ರಸ್ತಾಪವೂ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಕಾಫಿ ಬೆಳೆಗಾರರಿಗೆ 10ಹೆಚ್.ಪಿ. ವರೆಗೆ ಉಚಿತ ವಿದ್ಯುತ್ ನೀಡುವ ಬಗ್ಗೆ ಚರ್ಚೆ ನಡೆಸಲಾಗುವುದು. ಟ್ರಾನ್ಸ್ ಫಾರ್ಮರ್ ಹಾಳಾದ 24ಗಂಟೆಯೊಳಗೆ ಬದಲಾಯಿಸುವ ವ್ಯವಸ್ಥೆಯನ್ನು ಜಾರಿಗೆ ತರಲಾಗುತ್ತಿದೆ. 160 ಟಿಸಿ ಬ್ಯಾಂಕುಗಳನ್ನು ನಿರ್ಮಿಸಿ ನಿರ್ವಹಣೆ ಮಾಡಲಾಗುವುದು. 15 ಟಿಸಿ ದುರಸ್ತಿ ಕೇಂದ್ರ ಆರಂಭವಾಗಿದ್ದು, ಇನ್ನೂ 10 ಟಿಸಿ ದುರಸ್ತಿ ಕೇಂದ್ರಗಳು ಆರಂಭವಾಗಲಿವೆ ಎಂದು ಅವರು ಹೇಳಿದ್ದಾರೆ.
ಸರ್ಕಾರಿ ಕಚೇರಿಗಳ 5792 ಕೋಟಿ ರೂ. ವಿದ್ಯುತ್ ಬಿಲ್ ಬಾಕಿ ಇದ್ದು, ಸರ್ಕಾರಿ ಕಟ್ಟಡಗಳಲ್ಲಿ ಪ್ರೀಪೇಯ್ಡ್ ವಿದ್ಯುತ್ ಮೀಟರ್ ಅಳವಡಿಸಲು ಚಿಂತನೆ ನಡೆಸಲಾಗಿದೆ. ರಾಜ್ಯದ 27 ಅಮೃತ್ ನಗರಗಳಲ್ಲಿ ಪ್ರೀಪೇಯ್ಡ್ ಮೀಟರ್ ಅಳವಡಿಸುವ ಕುರಿತಾಗಿ ಚರ್ಚೆ ನಡೆದಿದೆ ಎಂದು ಮಾಹಿತಿ ನೀಡಿದ್ದಾರೆ.