ಉಡುಪಿ: ಕಲ್ಲಿದ್ದಲು ಬೆಲೆ ಇಳಿಕೆಯಾದಲ್ಲಿ ವಿದ್ಯುತ್ ದರ ಕಡಿತಗೊಳಿಸಲಾಗುವುದು ಎಂದು ಇಂಧನ ಸಚಿವ ವಿ. ಸುನಿಲ್ ಕುಮಾರ್ ತಿಳಿಸಿದ್ದಾರೆ.
ಅನೇಕ ವರ್ಷಗಳಿಂದ ಕಲ್ಲಿದ್ದಲು ಮತ್ತು ತೈಲ ಬೆಲೆ ಏರಿಕೆಯಾದಂತೆ ವಿದ್ಯುತ್ ಬೆಲೆಯನ್ನು ಪರಿಷ್ಕರಿಸಲಾಗುತ್ತಿದೆ. ಈಗ ಮೂರು ತಿಂಗಳಿಗೊಮ್ಮೆ ದರ ಪರಿಷ್ಕರಣೆಗೆ ನಿರ್ಧರಿಸಲಾಗಿದೆ. ಕಲ್ಲಿದ್ದಲು ಮತ್ತು ತೈಲಬೆಲೆ ಇಳಿಕೆಯಾದಲ್ಲಿ ವಿದ್ಯುತ್ ಬೆಲೆ ಕೂಡ ಇಳಿಕೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ಪ್ರತಿ ಮೂರು ತಿಂಗಳಿಗೊಮ್ಮೆ ವಿದ್ಯುತ್ ದರ ಏರಿಕೆ ಮಾಡುವ ಬದಲು ವರ್ಷಕ್ಕೊಮ್ಮೆ ಹೆಚ್ಚಳ ಮಾಡುವ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪ್ರಸ್ತಾವನೆ ಮುಂದಿಟ್ಟಿದ್ದೇನೆ. ಗ್ರಾಹಕರಿಗೆ ಹೊರೆಯಾಗುವುದರಿಂದ ವರ್ಷಕ್ಕೊಮ್ಮೆ ದರ ಹೆಚ್ಚಿಸುವುದು ಸೂಕ್ತ ಎಂದು ಹೇಳಲಾಗಿದೆ. ರಾಜ್ಯದಲ್ಲಿ ಉತ್ತಮ ಮಳೆಯಾಗಿದ್ದು, ವಿದ್ಯುತ್ ಉತ್ಪಾದನೆಯಲ್ಲಿ ಯಾವುದೇ ಕೊರತೆ ಇಲ್ಲ. ಕಲ್ಲಿದ್ದಲು ದಾಸ್ತಾನು ಕೂಡ ಇದೆ. ದೀಪಾವಳಿಗೆ ಲೋಡ್ ಶೆಡ್ಡಿಂಗ್ ಇರುವುದಿಲ್ಲ. ಬೇಸಿಗೆಯಲ್ಲಿಯೂ ವಿದ್ಯುತ್ ತೊಂದರೆ ಆಗದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.