ಬೆಂಗಳೂರು: ವಿದ್ಯುತ್ ಪ್ರಿಪೇಯ್ಡ್ ವ್ಯವಸ್ಥೆ ಶೀಘ್ರವೇ ಜಾರಿ ಆಗಲಿದೆ. ರಾಜ್ಯದಾದ್ಯಂತ ಪ್ರಿಪೇಯ್ಡ್ ಸ್ಮಾರ್ಟ್ ಮೀಟರ್ ಕಡ್ಡಾಯ ಅಳವಡಿಕೆಗೆ ಸರ್ಕಾರ ಸಿದ್ಧತೆ ಕೈಗೊಂಡಿದೆ. ಕೇಂದ್ರ ಸರ್ಕಾರ ನೀಡುವ ಸಬ್ಸಿಡಿ ಉಳಿಸಿಕೊಳ್ಳಲು 2023ರ ಒಳಗೆ ಮೀಟರ್ ಬದಲಾವಣೆ ಮಾಡುವ ಹೊಸ ಯೋಜನೆ ಜಾರಿಗೊಳಿಸಲಾಗುವುದು.
ವಿದ್ಯುತ್ ಗ್ರಾಹಕರು ಮೊದಲು ಹಣ ಕಟ್ಟಿ ನಂತರ ವಿದ್ಯುತ್ ಬಳಸುವ ಪ್ರಿಪೇಯ್ಡ್ ಸ್ಮಾರ್ಟ್ ಮೀಟರ್ ಕಡ್ಡಾಯ ಅಳವಡಿಕೆಗೆ ಇಂಧನ ಇಲಾಖೆ ಸಿದ್ಧತೆ ನಡೆಸಿದೆ. ಪ್ರಸ್ತುತ ಗ್ರಾಹಕರು ಬಳಕೆ ಮಾಡುವ ವಿದ್ಯುತ್ ಬಿಲ್ ಬಂದ ನಂತರ ಶುಲ್ಕ ಪಾವತಿಸಬೇಕಿದೆ. ಹೊಸ ವ್ಯವಸ್ಥೆ ಜಾರಿಯಾದ ನಂತರ ಮೊದಲೇ ನಿರ್ದಿಷ್ಟ ಹಣ ಪಾವತಿಸಿ ನಂತರ ವಿದ್ಯುತ್ ಬಳಸಬೇಕಿದೆ.
ಪ್ರತಿ ತಿಂಗಳಿಗೂ ಮೊದಲೇ ಶುಲ್ಕ ಪಾವತಿಸಬೇಕಿದೆ. ವಿದ್ಯುತ್ ಸರಬರಾಜು ವ್ಯವಸ್ಥೆ ಸುಧಾರಣೆ ಮತ್ತು ಆದಾಯ ಸೋರಿಕೆ ತಡೆಗಟ್ಟಲು ಕೇಂದ್ರ ಸರ್ಕಾರ ಈ ಯೋಜನೆ ರೂಪಿಸಿದೆ.
ಈ ವರ್ಷದ ಡಿಸೆಂಬರ್ ಒಳಗೆ ಅಳವಡಿಸುವ ವಿದ್ಯುತ್ ಮೀಟರ್ ಗಳಿಗೆ ಶೇಕಡಾ 15 ರಷ್ಟು ಸಬ್ಸಿಡಿ ನೀಡಲಾಗುವುದು. ನಂತರ ಸಬ್ಸಿಡಿ ಸಿಗುವುದಿಲ್ಲ. ಸಬ್ಸಿಡಿ ಪಡೆದುಕೊಳ್ಳಲು ರಾಜ್ಯದಲ್ಲಿ ಪ್ರಿಪೇಯ್ಡ್ ಮೀಟರ್ ಅಳವಡಿಕೆಗೆ ಇಂಧನ ಇಲಾಖೆ ಸಿದ್ಧತೆ ನಡೆಸಿದೆ ಎಂದು ಹೇಳಲಾಗಿದೆ.