ಬೆಂಗಳೂರು: ಮೊಬೈಲ್ ಫೋನ್ ಗಳಲ್ಲಿ ಇರುವಂತೆ ಪ್ರೀಪೇಯ್ಡ್ ಮಾದರಿಯ ವಿದ್ಯುತ್ ಬಳಕೆ ವ್ಯವಸ್ಥೆ ಜಾರಿಗೆ ತರಲಾಗುತ್ತದೆ.
ರಾಜ್ಯದಲ್ಲಿ ಶೀಘ್ರವೇ ವಿದ್ಯುತ್ ಮೀಟರ್ ಗಳು ಪ್ರೀಪೇಯ್ಡ್ ಆಗಲಿವೆ. ಸ್ಮಾರ್ಟ್ ಮೀಟರ್ ಅಳವಡಿಸುವಂತೆ ಕೇಂದ್ರ ಸರ್ಕಾರ ಸೂಚನೆ ನೀಡಿದೆ. 2023ರ ಡಿಸೆಂಬರ್ ಒಳಗೆ ರಾಜ್ಯದ್ಯಂತ ಸ್ಮಾರ್ಟ್ ಮೀಟರ್ ಅಳವಡಿಕೆ ಮಾಡುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಲಾಗಿದೆ. ಮೊದಲು ವಿದ್ಯುತ್ ಶುಲ್ಕವನ್ನು ಪಾವತಿಸಿ ನಂತರ ವಿದ್ಯುತ್ ಬಳಸಬೇಕಿದೆ.
ವಿದ್ಯುತ್ ಸೋರಿಕೆ ತಡೆಗಟ್ಟುವುದು, ನಷ್ಟ ತಗ್ಗಿಸುವುದು ಸೇರಿದಂತೆ ಹಲವು ಉದ್ದೇಶದೊಂದಿಗೆ ಯೋಜನೆ ಜಾರಿಗೆ ತರಲಾಗುತ್ತಿದೆ. ಎಸ್ಕಾಂಗಳು ಪ್ರೀಪೇಯ್ಡ್ ಸ್ಮಾರ್ಟ್ ಮೀಟರ್ ಅಳವಡಿಸಿದಲ್ಲಿ ಕೇಂದ್ರ ಸರ್ಕಾರದಿಂದ ಶೇಕಡ 15 ರಷ್ಟು ಪ್ರೋತ್ಸಾಹ ಧನ ನೀಡಲಿದೆ. ಕೇಂದ್ರ ಇಂಧನ ಸಚಿವಾಲಯದಿಂದ ಪ್ರೀಪೇಯ್ಡ್ ಸ್ಮಾರ್ಟ್ ಮೀಟರ್ ಅಳವಡಿಕೆಗೆ ನಿರ್ದೇಶನ ನೀಡಲಾಗಿದೆ. ಇದು ಖಾಸಗೀಕರಣದ ಹುನ್ನಾರವಾಗಿದೆ. ವಿದ್ಯುತ್ ಸರಬರಾಜು ವ್ಯವಸ್ಥೆಯನ್ನು ಖಾಸಗಿಯವರಿಗೆ ವಹಿಸಲು ಹುನ್ನಾರ ನಡೆದಿದೆ ಎಂದು ಎಸ್ಕಾಂ ಉದ್ಯೋಗಿಗಳಿಂದ ಆರೋಪ ಕೇಳಿಬಂದಿದೆ.
ಈ ವ್ಯವಸ್ಥೆ ಜಾರಿಯಾದಲ್ಲಿ ನಿಮಗೆ ಎಷ್ಟು ವಿದ್ಯುತ್ ಬೇಕಾಗುತ್ತದೆಯೋ ಅಷ್ಟು ಯುನಿಟ್ ಗೆ ಮೊದಲೇ ಹಣ ಕಟ್ಟಬೇಕು. ನಂತರ ವಿದ್ಯುತ್ ಬಳಸಬೇಕಿದೆ ಎನ್ನಲಾಗಿದೆ.