ಬೆಂಗಳೂರು: ಕೊರೊನಾ ನಂತರದಲ್ಲಿ ರಾಜ್ಯದಲ್ಲಿ ಆರ್ಥಿಕ ಚಟುವಟಿಕೆಗಳು ಚೇತರಿಕೆ ಕಾಣುತ್ತಿದೆ. ಇಂತಹ ಸಂದರ್ಭದಲ್ಲಿ ವಿದ್ಯುತ್ ಬೇಡಿಕೆ ಸಹಜ. ಬೇಸಿಗೆಯಲ್ಲಿಯೂ ವಿದ್ಯುತ್ ಬೇಡಿಕೆ ಹೆಚ್ಚಾಗುವುದರಿಂದ ಪವರ್ ಕಟ್, ಲೋಡ್ ಶೆಡ್ಡಿಂಗ್ ಸಾಮಾನ್ಯವಾಗಿರುತ್ತದೆ.
ಆದರೆ, ಈ ಬಾರಿ ರಾಜ್ಯದ ಜನತೆಗೆ ಸಿಹಿ ಸುದ್ದಿ ಸಿಕ್ಕಿದೆ. ಈ ಬಾರಿ ಬೇಸಿಗೆಯಲ್ಲಿ ರಾಜ್ಯಕ್ಕೆ ವಿದ್ಯುತ್ ಸಮಸ್ಯೆ ಎದುರಾಗುವುದಿಲ್ಲ. ಸುಮಾರು ಐದು ತಿಂಗಳಿನಿಂದ ಸ್ಥಗಿತಗೊಂಡಿದ್ದ ರಾಯಚೂರಿನ ಆರ್ಟಿಪಿಎಸ್ ಮತ್ತು ಬಿಟಿಪಿಎಸ್ ವಿದ್ಯುತ್ ಸ್ಥಾವರದಲ್ಲಿ ವಿದ್ಯುತ್ ಉತ್ಪಾದನೆ ಆರಂಭವಾಗಿದೆ. ರಾಜ್ಯದ ಜಲಾಶಯಗಳಲ್ಲಿಯೂ ನೀರಿನ ಸಂಗ್ರಹ ಉತ್ತಮವಾಗಿದೆ.
ಪ್ರಸ್ತುತ ಜಲ ವಿದ್ಯುತ್ ಘಟಕಗಳಿಂದ ಶೇಕಡ 70 ರಷ್ಟು, ಉಷ್ಣ ವಿದ್ಯುತ್ ಸ್ಥಾವರಗಳಿಂದ ಶೇಕಡ 30 ರಷ್ಟು ಬೇಡಿಕೆಯ ವಿದ್ಯುತ್ ಉತ್ಪಾದಿಸಲಾಗುತ್ತಿದೆ. ಉಷ್ಣ ವಿದ್ಯುತ್ ಸ್ಥಾವರಗಳ ಉತ್ಪಾದನೆ ಹೆಚ್ಚಾಗಲಿದೆ. ಇದರಿಂದಾಗಿ ರಾಜ್ಯದಲ್ಲಿ ಬೇಸಿಗೆಯಲ್ಲಿ ವಿದ್ಯುತ್ ಕೊರತೆಯಾಗುವ ಸಾಧ್ಯತೆ ಇಲ್ಲವೆಂದು ಹೇಳಲಾಗಿದೆ.
ಗೃಹಬಳಕೆ, ರೈತರು, ಕೈಗಾರಿಕೆಗಳು, ವ್ಯಾಪಾರ-ವಾಣಿಜ್ಯ ಉದ್ಯಮಗಳಿಗೆ ಈ ಬಾರಿ ವಿದ್ಯುತ್ ಕೊರತೆ ಎದುರಾಗುವುದಿಲ್ಲ. ಸದ್ಯ ವಿದ್ಯುತ್ ಬೇಡಿಕೆ ಸಹಜ ಸ್ಥಿತಿಗೆ ಮರಳಿದ್ದು, ಬೇಸಿಗೆಯಲ್ಲಿ ಬೇಡಿಕೆ ಹೆಚ್ಚಾದರೂ ಕೊರತೆಯಾಗುವ ಸಾಧ್ಯತೆ ಇಲ್ಲವೆಂದು ಹೇಳಲಾಗಿದೆ.