ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ಕರ್ನಾಟಕ ವಿದ್ಯುತ್ಛಕ್ತಿ ನಿಯಂತ್ರಣ ಮಂಡಳಿ ವಿದ್ಯುತ್ ದರ ಪರಿಷ್ಕರಣೆ ಅನ್ವಯ ಹೊಸ ದರಗಳ ಪ್ರಕಟಣೆಯನ್ನು ಮುಂದೂಡಿದೆ.
ಮಂಡಳಿಯ ಅಧ್ಯಕ್ಷ ರವಿಕುಮಾರ್ ಅಧ್ಯಕ್ಷತೆಯಲ್ಲಿ ಫೆಬ್ರವರಿ 13 ರಿಂದ ಮಾರ್ಚ್ 1 ರವರೆಗೆ ಬೆಂಗಳೂರು, ಮೈಸೂರು, ಮಂಗಳೂರು, ಹುಬ್ಬಳ್ಳಿ, ಕಲಬುರ್ಗಿ, ಹುಕ್ಕೇರಿಯಲ್ಲಿ ಸಾರ್ವಜನಿಕ ಅದಾಲತ್ ನಡೆಸಲಾಗಿತ್ತು. ವಿದ್ಯುತ್ ದರ ಪರಿಷ್ಕರಣೆಗೆ ಅಂತಿಮ ಸಿದ್ಧತೆ ಕೈಗೊಂಡ ಸಂದರ್ಭದಲ್ಲಿಯೇ ರಾಜ್ಯ ವಿಧಾನಸಭೆ ಚುನಾವಣೆ ಘೋಷಣೆ ಆಗಿದೆ.
ಹೀಗಾಗಿ ಹೊಸ ದರ ಪ್ರಕಟಣೆಯನ್ನು ಸದ್ಯಕ್ಕೆ ತಡೆಹಿಡಿಯಲಾಗಿದೆ. ಎಸ್ಕಾಂಗಳು ಪ್ರತಿ ಯೂನಿಟ್ ಗೆ 1.50 ರೂ. ನಿಂದ 2 ರೂ.ವರೆಗೆ ವಿದ್ಯುತ್ ದರ ಹೆಚ್ಚಳ ಮಾಡಬೇಕೆಂದು ಬೇಡಿಕೆ ಸಲ್ಲಿಸಿವೆ. ಕರ್ನಾಟಕ ವಿದ್ಯುತ್ಛಕ್ತಿ ನಿಯಂತ್ರಣ ಮಂಡಳಿ ಎಸ್ಕಾಂಗಳ ಬೇಡಿಕೆ ಮತ್ತು ಸಾರ್ವಜನಿಕರ ಅಭಿಪ್ರಾಯದ ನಂತರ ವಿದ್ಯುತ್ ದರ ಪರಿಷ್ಕರಣೆ ಮಾಡಿ ಹೊಸ ದರಗಳ ಪ್ರಕಟಣೆಗೆ ಮುಂದಾಗಿತ್ತು. ನೀತಿ ಸಂಹಿತೆ ಹಿನ್ನೆಲೆಯಲ್ಲಿ ಅದನ್ನು ಮುಂದೂಡಲಾಗಿದೆ ಎಂದು ಹೇಳಲಾಗಿದೆ.