
ಬೆಂಗಳೂರು: ಮೊದಲೇ ಬೆಲೆ ಏರಿಕೆಯಿಂದ ತತ್ತರಿಸಿದ ಜನತೆಗೆ ಶಾಕಿಂಗ್ ನ್ಯೂಸ್ ಇಲ್ಲಿದೆ. ವಿದ್ಯುತ್ ದರ ಹೆಚ್ಚಳವಾಗುವ ಸಾಧ್ಯತೆ ಇದೆ.
ಇಂಧನ ಕ್ಷೇತ್ರ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿರುವ ಹಿನ್ನೆಲೆಯಲ್ಲಿ ವಿದ್ಯುತ್ ದರ ಏರಿಕೆ ಮಾಡಲು ಬೆಸ್ಕಾಂ, ಮೆಸ್ಕಾಂ ಮೊದಲಾದ ಎಸ್ಕಾಂಗಳಿಂದ ಕೆ.ಇ.ಆರ್.ಸಿ.ಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎನ್ನಲಾಗಿದೆ.
ಕಳೆದ ನವಂಬರ್ ನಲ್ಲಿ ಪ್ರತಿ ಯೂನಿಟ್ ಗೆ 33 ಪೈಸೆ ವಿದ್ಯುತ್ ದರ ಹೆಚ್ಚಳಕ್ಕೆ ಕೆ.ಇ.ಆರ್.ಸಿ. ಅನುಮತಿ ನೀಡಿತ್ತು. ಈಗ ಯೂನಿಟ್ ಗೆ 1.39 ರೂಪಾಯಿ ಹೆಚ್ಚಳ ಮಾಡುವಂತೆ ವಿದ್ಯುತ್ ಸರಬರಾಜು ಸಂಸ್ಥೆಗಳು ಪ್ರಸ್ತಾವನೆ ಸಲ್ಲಿಸಲು ಮುಂದಾಗಿವೆ. ನವೆಂಬರ್ ನಲ್ಲಿ ಏರಿಕೆ ಮಾಡಲಾಗಿದ್ದ ವಿದ್ಯುತ್ ದರ 5 ತಿಂಗಳಿಗೆ ಸೀಮಿತವಾಗಿದ್ದು ವಿದ್ಯುತ್ ಖರೀದಿ ವೆಚ್ಚ ಹೆಚ್ಚಾಗುತ್ತಿರುವುದರಿಂದ ಮತ್ತು ನಿರ್ವಹಣೆ, ಕಾರ್ಯ, ಬಂಡವಾಳ ವೆಚ್ಚದ ಸಾಲ ಹೆಚ್ಚಾದ ಕಾರಣ ಪ್ರತಿ ಯೂನಿಟ್ ಗೆ 1.39 ರೂಪಾಯಿ ಹೆಚ್ಚಳ ಮಾಡಲು ಮನವಿ ಮಾಡಲಾಗಿದೆ. 5 ಎಸ್ಕಾಂಗಳಿಗೆ 5872 ಕೋಟಿ ರೂಪಾಯಿ ಹೊರೆಯಾಗುತ್ತಿದ್ದು, ವಿದ್ಯುತ್ ದರ ಏರಿಕೆ ಮೂಲಕ ಇದನ್ನು ಭರಿಸಲು ಚಿಂತನೆ ನಡೆದಿದೆ ಎಂದು ಹೇಳಲಾಗಿದೆ.