ಬೆಂಗಳೂರು: ಪ್ರತಿ ಮನೆಗೆ 200 ಯೂನಿಟ್ ವಿದ್ಯುತ್ ಉಚಿತವಾಗಿ ನೀಡುವ ಗೃಹಜ್ಯೋತಿ ಯೋಜನೆಗೆ ಗ್ರೀನ್ ಸಿಗ್ನಲ್ ನೀಡಿದ ಕಾಂಗ್ರೆಸ್ ಸರ್ಕಾರ ಇದರ ಬೆನ್ನಲ್ಲೇ ಗ್ರಾಹಕರಿಗೆ ವಿದ್ಯುತ್ ಬೆಲೆ ಏರಿಕೆಯ ಶಾಕ್ ನೀಡಿದೆ.
ಮೇ 12ರಂದು ಪ್ರತಿ ಯೂನಿಟ್ ವಿದ್ಯುತ್ ಗೆ 70 ಪೈಸೆ ಹೆಚ್ಚಳ ಮಾಡಿದ್ದ ಕರ್ನಾಟಕ ವಿದ್ಯುತ್ಛಕ್ತಿ ನಿಯಂತ್ರಣ ಆಯೋಗ ಈಗ ಮತ್ತೆ ಇಂಧನ ಮತ್ತು ವಿದ್ಯುತ್ ಖರೀದಿ ವೆಚ್ಚ ಹೊಂದಾಣಿಕೆ ಶುಲ್ಕದ ನೆಪವೊಡ್ಡಿ ವಿವಿಧ ಎಸ್ಕಾಂಗಳ ವ್ಯಾಪ್ತಿಯಲ್ಲಿ ಪ್ರತಿ ಯೂನಿಟ್ ಗೆ ಸರಾಸರಿ 51 ಪೈಸೆ ಶುಲ್ಕ ಹೆಚ್ಚಳ ಮಾಡಿ ಆದೇಶ ಹೊರಡಿಸಿದೆ.
ಜುಲೈ ನಿಂದ ಪರಿಷ್ಕೃತ ಶುಲ್ಕ ಸಂಗ್ರಹಿಸಲಿದ್ದು, ಗೃಹಜೋತಿ ಯೋಜನೆಯ ಫಲಾನುಭವಿಗಳು ಇದರಿಂದ ಪಾರಾಗಿದ್ದಾರೆ.
ಏಪ್ರಿಲ್ 1ರಿಂದ ಅನ್ವಯವಾಗುವಂತೆ ಮೇ 12ರಂದು ಪ್ರತಿ ಯೂನಿಟ್ ಗೆ 70 ಪೈಸೆಯಷ್ಟು ದರ ಹೆಚ್ಚಳ ಮಾಡಲಾಗಿತ್ತು. ಏಪ್ರಿಲ್ ಮತ್ತು ಮೇ ತಿಂಗಳ 2 ಹೆಚ್ಚುವರಿ ಶುಲ್ಕವನ್ನು ಜೂನ್ ನಲ್ಲಿ ವಿಧಿಸಲಾಗುತ್ತದೆ.
ಮಾರ್ಚ್ 13 ರಂದು ವಿದ್ಯುತ್ಛಕ್ತಿ ನಿಯಂತ್ರಣ ಆಯೋಗ ನೀಡಿರುವ ಅನುಮೋದನೆಯ ಪ್ರಕಾರ ಏಪ್ರಿಲ್ ನಿಂದ ಜೂನ್ ವರೆಗೆ ಮೂರು ತಿಂಗಳ ಕಾಲ ಬೆಸ್ಕಾಂ ವ್ಯಾಪ್ತಿಯಲ್ಲಿ 1.01 ರೂ., ಮೆಸ್ಕಾಂ ವ್ಯಾಪ್ತಿಯಲ್ಲಿ 93 ಪೈಸೆ, ಸೆಸ್ಕಾಂ ವ್ಯಾಪ್ತಿಯಲ್ಲಿ 82 ಪೈಸೆ, ಹೆಸ್ಕಾಂ ವ್ಯಾಪ್ತಿಯಲ್ಲಿ 1 ರೂಪಾಯಿ, ಜೆಸ್ಕಾಂ ವ್ಯಾಪ್ತಿಯಲ್ಲಿ 67 ಪೈಸೆಯಷ್ಟು ದರ ಹೆಚ್ಚಳ ಮಾಡಬಹುದಾಗಿತ್ತು. ಈ ಹೊರೆಯನ್ನು ಆರು ತಿಂಗಳಿಗೆ ಹಂಚಿಕೆ ಮಾಡಿದ ಕಾರಣ ಏಪ್ರಿಲ್ 1ರಿಂದ ಜೂನ್ 30ರವರೆಗೆ ಸಂಗ್ರಹಿಸುವ ಬದಲು ಜುಲೈ 1ರಿಂದ ಡಿಸೆಂಬರ್ 31ರವರೆಗೆ ವಸೂಲಿ ಮಾಡಲು ಅವಕಾಶ ನೀಡಲಾಗಿದೆ.
ಮೊದಲ ಹಂತದಲ್ಲಿ ಜುಲೈನಿಂದ ಸೆಪ್ಟಂಬರ್ ವರೆಗೆ ಬೆಸ್ಕಾಂ ಗ್ರಾಹಕರಿಗೆ ಪ್ರತಿ ಯೂನಿಟ್ ಗೆ 51 ಪೈಸೆ, ಮೆಸ್ಕಾಂ ಗ್ರಾಹಕರಿಗೆ 47 ಪೈಸೆ, ಸೆಸ್ಕಾಂ ಗ್ರಾಹಕರಿಗೆ 41 ಪೈಸೆ, ಹೆಸ್ಕಾಂ ಗ್ರಾಹಕರಿಗೆ 50 ಪೈಸೆ, ಜೆಸ್ಕಾಂ ವ್ಯಾಪ್ತಿಯಲ್ಲಿ 34 ಪೈಸೆಯಷ್ಟು ಶುಲ್ಕ ಹೆಚ್ಚಳ ಆಗಲಿದೆ.