ಬೆಂಗಳೂರು: ರಾಜ್ಯದ ಜನತೆಗೆ ವಿದ್ಯುತ್ ದರ ಏರಿಕೆ ಬಿಸಿ ತಟ್ಟಿದೆ. ನಾಲ್ಕು ಸ್ತರದ ವಿದ್ಯುತ್ ಬಿಲ್ ವ್ಯವಸ್ಥೆ ಬದಲಾಯಿಸಿ ಎರಡು ಸ್ತರದ ಬಿಲ್ ನೀಡಲಾಗುತ್ತಿದೆ.
ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ ಏಪ್ರಿಲ್ 1ರಿಂದ ಪೂರ್ವಾನ್ವಯವಾಗುವಂತೆ ವಿದ್ಯುತ್ ದರ ಹೆಚ್ಚಳ ಮಾಡಿ ಆದೇಶ ಹೊರಡಿಸಿದೆ. ಜೂನ್ ತಿಂಗಳಿನಿಂದ ಗ್ರಾಹಕರಿಗೆ ಎರಡು ಸ್ತರದ ವಿದ್ಯುತ್ ಯೂನಿಟ್ ದರ ನಿಗದಿಪಡಿಸಲಾಗಿದೆ. 100 ಯೂನಿಟ್ ವರೆಗೆ ಪ್ರತಿ ಯೂನಿಟ್ ಗೆ 4.15 ರೂ. ಹಾಗೂ 100 ಯೂನಿಟ್ ಮೀರಿದಾಗ ಎಲ್ಲಾ ಯೂನಿಟ್ ಗೆ ತಲಾ 7 ರೂ. ದರ ವಿಧಿಸಲಾಗುತ್ತಿದೆ.
100 ಯೂನಿಟ್ ಗಿಂತ ಹೆಚ್ಚು ವಿದ್ಯುತ್ ಬಳಕೆ ಮಾಡಿದ ಗ್ರಾಹಕರಿಗೆ ಪ್ರತಿ ಯೂನಿಟ್ ಗೆ 7 ರೂಪಾಯಿ ನೀಡಬೇಕಿದೆ. ಮೇ ತಿಂಗಳಿಗೆ ಹೋಲಿಸಿದಾಗ ಜೂನ್ ತಿಂಗಳ ವಿದ್ಯುತ್ ಬಿಲ್ ಭಾರಿ ಏರಿಕೆ ಕಂಡಿದೆ. 100ಕ್ಕಿಂತ ಹೆಚ್ಚು ಯೂನಿಟ್ ವಿದ್ಯುತ್ ಬಳಸುವವರಿಗೆ ವಿದ್ಯುತ್ ದರ ದುಬಾರಿಯಾಗಲಿದೆ. ಇದರೊಂದಿಗೆ ನಿಗದಿತ ವೆಚ್ಚ, ತೆರಿಗೆ, ದಂಡ, ಇಂಧನ ವೆಚ್ಚವನ್ನು ಪ್ರತ್ಯೇಕವಾಗಿ ಪಾವತಿಸಬೇಕಿರುವುದರಿಂದ ಗ್ರಾಹಕರಿಗೆ ಬಿಸಿ ತಟ್ಟಿದೆ.