ಧಾರವಾಡ: ದೋಷಯುಕ್ತ ಎಲೆಕ್ಟ್ರಿಕ್ ವಾಹನ ಕೊಟ್ಟ ಟಿವಿಎಸ್ ಕಂಪನಿಗೆ ಹೊಸ ವಾಹನ ಕೊಡಲು ಅಥವಾ 1 ಲಕ್ಷ 60 ಸಾವಿರ ರೂಪಾಯಿ ದಂಡ ಮತ್ತು ಪರಿಹಾರ ಕೊಡಲು ಧಾರವಾಡ ಜಿಲ್ಲಾ ಗ್ರಾಹಕರ ಆಯೋಗ ಆದೇಶ ನೀಡಿದೆ.
ಹುಬ್ಬಳ್ಳಿಯ ಶಿಂದೆ ಕಾಂಪ್ಲೆಕ್ಸ್ ನಿವಾಸಿ ಉಷಾ ಜೈನ್ ಎಂಬುವವರು ವಿದ್ಯಾನಗರದ ಪ್ರಕಲ್ಪ ಮೋಟರ್ಸ್ ಇವರಿಂದ 2021ರ ಜೂ. 18 ರಂದು 1,25,000 ರೂ. ಕೊಟ್ಟು ಟಿವಿಎಸ್ ಐಕ್ಯೂಬ್ ಇಲೆಕ್ಟ್ರಿಕ್ ವಾಹನ ಖರೀದಿಸಿದ್ದರು. ವಾಹನ ಖರೀದಿಸಿದ 6 ತಿಂಗಳಲ್ಲಿಯೇ ಅದರ ಬ್ರೇಕ್‍ನಲ್ಲಿ ಕರೆಂಟ್ ಬಂದು ಆ ವಾಹನದಲ್ಲಿ ದೋಷ ಕಂಡು ಬಂದಿತ್ತು. ಈ ಬಗ್ಗೆ ದೂರುದಾರರು ಪ್ರಕಲ್ಪ ಮೋಟರ್ಸ್‍ಗೆ ವಾಹನ ತೆಗೆದುಕೊಂಡು ಹೋಗಿ ದೋಷ ಸರಿಪಡಿಸಲು ಹಲವು ಬಾರಿ ಕೋರಿಕೊಂಡಿದ್ದರು.
ಆಗ ಪ್ರಕಲ್ಪ ಮೋಟರ್ಸ್ ನವರು ಸದರಿ ವಾಹನದ ಹಲವು ಬಿಡಿ ಭಾಗಗಳನ್ನು 5-6 ಸಾರಿ ಬದಲಾಯಿಸಿ ರಿಪೇರಿ ಮಾಡಿಕೊಟ್ಟಿದ್ದರು. ಆದರೂ ಸಹ ವಾಹನದ ರಿಪೇರಿ ಕೆಲಸ ಸರಿಯಾಗಿ ಆಗಿರಲಿಲ್ಲ. ವಾಹನವನ್ನು ಚಾಲು ಮಾಡುವಾಗ ದೂರುದಾರರ ಕೈಗೆ ಇಲೆಕ್ಟ್ರಿಕ್ ಶಾಕ್ ತಗುಲುತ್ತಿತ್ತು. ಸಾಕಷ್ಟು ರಿಪೇರಿ ಮಾಡಿದರೂ ಅದರಲ್ಲಿ ಯಾವುದೇ ಸುಧಾರಣೆ ಆಗದ್ದರಿಂದ ಸದರಿ ವಾಹನವನ್ನು ಬದಲಾಯಿಸಿ ಬೇರೆ ವಾಹನ ಕೊಡುವಂತೆ ಅಥವಾ ಆ ವಾಹನದ ಸಂಪೂರ್ಣ ಹಣವನ್ನು ಮರಳಿಸುವಂತೆ ದೂರುದಾರರು ಪ್ರಕಲ್ಪ ಮೋಟರ್ಸ್ ನವರಿಗೆ ಮತ್ತು ಟಿವಿಎಸ್ ಕಂಪನಿಗೆ ಕೇಳಿಕೊಂಡಿದ್ದರು.
ದೂರುದಾರರ ವಿನಂತಿಯನ್ನು ಎದುರುದಾರರು ನಿರಾಕರಿಸಿದ್ದರು. ಅವರ ಈ ನಡಾವಳಿಕೆ ಗ್ರಾಹಕರ ರಕ್ಷಣಾ ಕಾಯ್ದೆ ಅಡಿ ಸೇವಾ ನ್ಯೂನ್ಯತೆ ಆಗುತ್ತದೆ ಅಂತಾ ಹೇಳಿ ಎದುರುದಾರರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಕೋರಿ ದೂರುದಾರರು ಧಾರವಾಡ ಜಿಲ್ಲಾ ಗ್ರಾಹಕರ ಆಯೋಗಕ್ಕೆ 2023 ರ ಫೆ. 9 ರಂದು ದೂರು ಸಲ್ಲಿಸಿದ್ದರು.
ಸದರಿ ದೂರಿನ ಬಗ್ಗೆ ಕೂಲಂಕಷವಾಗಿ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷ ಈಶಪ್ಪ ಭೂತೆ, ಸದಸ್ಯರಾದ ವಿಶಾಲಾಕ್ಷಿ ಅ. ಬೋಳಶೆಟ್ಟಿ ಹಾಗೂ ಪ್ರಭು ಸಿ. ಹಿರೇಮಠ ಅವರು ಸದರಿ ಎಲೆಕ್ಟ್ರಿಕ್ ವಾಹನ ಖರೀದಿಸಿದ 6 ತಿಂಗಳಲ್ಲಿಯೇ ಅದರಲ್ಲಿ ದೋಷ ಕಂಡುಬಂದಿದ್ದರಿಂದ ಮತ್ತು ಆ ಬಗ್ಗೆ ದೂರಿದರೂ ಎದುರುದಾರ ಕಂಪನಿಯವರು ಅದರ ದೋಷ ಸರಿಪಡಿಸಲು ಸೂಕ್ತ ಕ್ರಮ ಕೈಗೊಳ್ಳಲು ವಿಫಲರಾಗಿದ್ದಾರೆ.
ರಿಪೇರಿ ಮಾಡಿದ ನಂತರವು ಅದನ್ನು ಚಾಲನೆ ಮಾಡುವಾಗ ಸಡನ್ ಆಗಿ ಕರೆಂಟ್ ಬರುತ್ತಿರುವುದರಿಂದ ಆ ವಾಹನದಲ್ಲಿ ಉತ್ಪಾದನಾ ದೋಷ ಇದೆ ಅಂತ ಆಯೋಗ ಅಭಿಪ್ರಾಯಪಟ್ಟು ತೀರ್ಪು ನೀಡಿದೆ. ಎದುರುದಾರ ಟಿವಿಎಸ್ ಉತ್ಪಾದಾನಾ ಕಂಪನಿ ಮತ್ತು ಡೀಲರ್ ಗಳಿಂದ ದೂರುದಾರರಿಗೆ ಸೇವಾ ನ್ಯೂನ್ಯತೆ ಆಗಿರುವುದು ಮೇಲ್ನೊಟಕ್ಕೆ ಕಂಡುಬಂದಿದೆ ಅಂತಾ ಆಯೋಗ ತನ್ನ ತೀರ್ಪಿನಲ್ಲಿ ತಿಳಿಸಿದೆ.
ಎಲ್ಲ ಎದುರುದಾರರು ವೈಯಕ್ತಿಕವಾಗಿ ಮತ್ತು ಜಂಟಿ ಖಾತೆಯಿಂದ ಆ ಐಕ್ಯೂಬ್ ಎಲೆಕ್ಟ್ರಿಕ್ ವಾಹನವನ್ನು ಬದಲಾಯಿಸಿ ಅದೇ ರೀತಿಯ ಹೊಸ ವಾಹನವನ್ನು ತೀರ್ಪು ನೀಡಿದ ಒಂದು ತಿಂಗಳೊಳಗಾಗಿ ದೂರುದಾರರಿಗೆ ನೀಡುವಂತೆ ಆದೇಶಿಸಿದೆ.
ತೀರ್ಪು ನೀಡಿದ ಒಂದು ತಿಂಗಳೊಳಗಾಗಿ ಹೊಸ ವಾಹನ ಕೊಟ್ಟು ಬದಲಾವಣೆ ಮಾಡಲು ಎದುರುದಾರರು ವಿಫಲರಾದಲ್ಲಿ ನಂತರ ಆ ವಾಹನದ ಮೌಲ್ಯ ಪೂರ್ತಿ ಹಣ 1,25,000 ರೂ. 2023 ರ ಫೆ. 9 ರಿಂದ ರಿಂದ ಶೇ.8 ರಷ್ಟು ಬಡ್ಡಿ ಲೆಕ್ಕ ಹಾಕಿ ಹಣ ಸಂದಾಯ ಮಾಡುವಂತೆ ಎದುರುದಾರ ಕಂಪನಿಗೆ ಆದೇಶಿಸಿದೆ. ದೂರುದಾರರಿಗೆ ಆಗಿರುವ ಅನಾನುಕೂಲ ಮತ್ತು ಮಾನಸಿಕ ತೊಂದರೆಗಾಗಿ ಎದುರುದಾರರು 25,000ರೂ. ಪರಿಹಾರ ಹಾಗೂ 10,000 ರೂ. ಪ್ರಕರಣದ ಖರ್ಚು ವೆಚ್ಚ ನೀಡುವಂತೆ ಆಯೋಗ ನಿರ್ದೇಶಿಸಿದೆ.