ಬೆಂಗಳೂರು: 20 ಲಕ್ಷ ರೂ.ಗಿಂತ ಹೆಚ್ಚು ಮೌಲ್ಯದ ಎಲೆಕ್ಟ್ರಿಕ್ ವಾಹನಗಳ ತೆರಿಗೆ ವಿನಾಯಿತಿ ಮುಂದುವರೆದಿದೆ. ಸರ್ಕಾರ ಈ ಕುರಿತಾಗಿ ಅಧಿಕೃತ ಆದೇಶ ಹೊರಡಿಸಿದೆ. ಈ ಮೂಲಕ ದುಬಾರಿ ಮೊತ್ತದ ವಿದ್ಯುತ್ ಚಾಲಿತ ವಾಹನ ಖರೀದಿಸುವವರಿಗೆ ಸರ್ಕಾರ ಸಿಹಿ ಸುದ್ದಿ ನೀಡಿದೆ.
ರಾಜ್ಯದಲ್ಲಿ ನೋಂದಣಿಯಾಗುವ 20 ಲಕ್ಷ ರೂ.ಗಿಂತ ಹೆಚ್ಚು ಮೌಲ್ಯದ ಎಲೆಕ್ಟ್ರಿಕ್ ವಾಹನಗಳಿಗೆ ಅಜೀವ ತೆರಿಗೆ ವಿನಾಯಿತಿ ಹಿಂಪಡೆಯುವಂತೆ ರಾಜ್ಯ ರಸ್ತೆ ಪ್ರಾಧಿಕಾರ ಸಲ್ಲಿಸಿದ್ದ ಪ್ರಸ್ತಾಪವನ್ನು ಸರ್ಕಾರ ಒಪ್ಪಿಲ್ಲ. ತೆರಿಗೆ ವಿನಾಯಿತಿ ಮುಂದುವರೆಸಲು ಆದೇಶ ನೀಡಿದೆ. ಪರಿಸರ ಸ್ನೇಹಿ ಎಲೆಕ್ಟ್ರಿಕ್ ವಾಹನಗಳ ಖರೀದಿ ಉತ್ತೇಜಿಸಲು ಕೇಂದ್ರ ಸರ್ಕಾರ 2016ರಲ್ಲಿ ಎಲ್ಲಾ ರೀತಿಯ ಎಲೆಕ್ಟ್ರಿಕ್ ವಾಹನಗಳಿಗೆರಸ್ತೆ ತೆರಿಗೆ ವಿನಾಯಿತಿ ಘೋಷಿಸಿತ್ತು. ರಾಜ್ಯದಲ್ಲಿಯೂ ಎಲೆಕ್ಟ್ರಿಕ್ ವಾಹನಗಳ ಖರೀದಿಗೆ ತೆರಿಗೆ ವಿನಾಯಿತಿ ನೀಡಲಾಗಿದ್ದು, ಇದರಿಂದಾಗಿ ಹೆಚ್ಚಿನವರು ಎಲೆಕ್ಟ್ರಿಕ್ ವಾಹನ ಖರೀದಿಸತೊಡಗಿದ್ದಾರೆ.
ಶೂನ್ಯ ತೆರಿಗೆ, ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ, ಕಡಿಮೆ ನಿರ್ವಹಣಾ ವೆಚ್ಚ, ಪರಿಸರ ರಕ್ಷಣೆ ದೃಷ್ಟಿಯಿಂದ ಎಲೆಕ್ಟ್ರಿಕ್ ವಾಹನಗಳಿಗೆ ಸರ್ಕಾರದ ಉತ್ತೇಜನ, ಗೃಹಜ್ಯೋತಿ ಯೋಜನೆ ಸೇರಿ ಅನೇಕ ಕಾರಣಗಳಿಂದ ರಾಜ್ಯದಲ್ಲಿ ಎಲೆಕ್ಟ್ರಿಕ್ ವಾಹನಗಳ ಖರೀದಿ ಹೆಚ್ಚಾಗಿದೆ. ತೆರಿಗೆ ವಿನಾಯಿತಿಯಿಂದ ಆದಾಯ ಖೋತಾ ಆದ ಕಾರಣ ಸಾರಿಗೆ ಪ್ರಾಧಿಕಾರ ಎಲ್ಲ ರೀತಿಯ ಎಲೆಕ್ಟ್ರಿಕ್ ವಾಹನಗಳಿಗೆ ತೆರಿಗೆ ವಿಧಿಸಲು ಅನುಮತಿ ಕೋರಿ ಪ್ರಸ್ತಾವನೆ ಸಲ್ಲಿಸಿತ್ತು. ಆದರೆ, ಈ ಪ್ರಸ್ತಾಪವನ್ನು ಸರ್ಕಾರ ತಿರಸ್ಕರಿಸಿದ್ದು, ನಂತರ 20 ಲಕ್ಷಕ್ಕೂ ಹೆಚ್ಚಿನ ಮೌಲ್ಯದ ಎಲೆಕ್ಟ್ರಿಕ್ ವಾಹನಗಳಿಗೆ ಶೇಕಡ 18ರಷ್ಟು ತೆರಿಗೆ ವಿಧಿಸಲು ಸಾರಿಗೆ ಇಲಾಖೆ ಪ್ರಸ್ತಾವನೆ ಸಲ್ಲಿಸಿದ್ದು, ಈ ಪ್ರಸ್ತಾಪವನ್ನು ಕೂಡ ಸರ್ಕಾರ ತಿರಸ್ಕರಿಸಿ ತೆರಿಗೆ ವಿನಾಯಿತಿ ಮುಂದುವರಿಸಲು ಆದೇಶ ನೀಡಿದೆ.