ಬೆಂಗಳೂರು: ವಿದ್ಯುತ್ ಚಾಲಿತ ವಾಹನಗಳ ಬಳಕೆ ಉತ್ತೇಜನಕ್ಕೆ ಸರ್ಕಾರ ಕ್ರಮ ಕೈಗೊಂಡಿದ್ದು, ಪ್ರಸ್ತಕ ಸಾಲಿನಲ್ಲಿ 1190 ಎಲೆಕ್ಟ್ರಿಕ್ ವಾಹನ ಚಾರ್ಜಿಂಗ್ ಕೇಂದ್ರಗಳನ್ನು ಸ್ಥಾಪನೆ ಮಾಡಲು ಮುಂದಾಗಿದೆ.
ವಿದ್ಯುತ್ ಚಾಲಿತ ವಾಹನಗಳ ಚಾರ್ಜಿಂಗ್ ಕೇಂದ್ರ ಸ್ಥಾಪನೆಗೆ ಸ್ಥಳ ನೀಡುವ ಸರ್ಕಾರಿ ಇಲಾಖೆಗಳಿಗೆ ಪ್ರತಿ ಯೂನಿಟ್ ಗೆ ಒಂದು ರೂಪಾಯಿ ಆದಾಯ ಹಂಚಿಕೆಗೆ ಸರ್ಕಾರ ನಿರ್ಧರಿಸಿದೆ. ಸಾರ್ವಜನಿಕ-ಖಾಸಗಿ ಸಹಭಾಗಿತ್ವದ ಮಾದರಿಯಲ್ಲಿ ಟೆಂಡರ್ ಕರೆಯಲಿದ್ದು, ಪ್ರತಿ ಯುನಿಟ್ ಗೆ 1 ರೂಪಾಯಿ ಆದಾಯ ಸಂಚಿಕೆಗೆ ಅನುಮೋದನೆ ನೀಡಲಾಗಿದೆ.
ವಿದ್ಯುತ್ ಸರಬರಾಜು ಕಂಪನಿಗಳಿಗೆ ಇಂಧನ ಇಲಾಖೆಯಿಂದ ಈ ಕುರಿತು ಆದೇಶ ನೀಡಲಾಗಿದ್ದು, ಪಾರದರ್ಶಕ ಅಧಿನಿಯಮ ಹಾಗೂ ಕೇಂದ್ರ ಇಂಧನ ಸಚಿವಾಲಯ ಕಾಲಕಾಲಕ್ಕೆ ಹೊರಡಿಸುವ ಮಾರ್ಗಸೂಚಿ ಮತ್ತು ಮಾನದಂಡಗಳ ಪ್ರಕಾರ ಯೋಜನೆ ಅನುಷ್ಠಾನಗೊಳಿಸಬೇಕು ಎಂದು ಹೇಳಲಾಗಿದೆ.
ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿಗೆ ರಾಜ್ಯದ ನೋಡೆಲ್ ಏಜೆನ್ಸಿ ಜವಾಬ್ದಾರಿ ನೀಡಲಾಗಿದ್ದು, ಬೆಸ್ಕಾಂ ವ್ಯಾಪ್ತಿಯಲ್ಲಿ 455 ಸ್ಥಳಗಳ ಗುರಿ ನಿಗದಿಪಡಿಸಲಾಗಿದ್ದು 131 ಸ್ಥಳ ಗುರುತಿಸಲಾಗಿದೆ. ಚೆಸ್ಕಾಂ ವ್ಯಾಪ್ತಿಯಲ್ಲಿ 155 ಚಾರ್ಜಿಂಗ್ ಸೆಂಟರ್ ಗಳನ್ನು ಸ್ಥಾಪಿಸುವ ಗುರಿ ಇದ್ದು 208 ಸ್ಥಳ ಗುರುತಿಸಲಾಗಿದೆ.
ಮೆಸ್ಕಾಂ ವ್ಯಾಪ್ತಿಯಲ್ಲಿ 190 ಗುರಿ ಹೊಂದಿದ್ದು 173 ಸ್ಥಳ ಗುರುತಿಸಲಾಗಿದೆ. ಜೆಸ್ಕಾಂ ವ್ಯಾಪ್ತಿಯಲ್ಲಿ 150 ಹಾಗೂ ಹೆಸ್ಕಾಂ ವ್ಯಾಪ್ತಿಯಲ್ಲಿ 338 ಸ್ಥಳಗಳನ್ನು ಗುರುತಿಸಲಾಗಿದೆ.