ಬೆಂಗಳೂರು: ಮೊಟ್ಟೆ ಪ್ರಿಯರಿಗೆ ಶಾಕಿಂಗ್ ನ್ಯೂಸ್ ಇಲ್ಲಿದೆ. ಉತ್ಪಾದನೆ ಕಡಿಮೆಯಾಗಿ ಬೇಡಿಕೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಮೊಟ್ಟೆ ದರದಲ್ಲಿ ದಾಖಲೆ ಏರಿಕೆ ಕಂಡಿದೆ.
ಕೋಳಿ ಸಾಕಣೆದಾರರಿಂದ ಮೊಟ್ಟೆ ಖರೀದಿಸಲು ರಾಷ್ಟ್ರೀಯ ಮೊಟ್ಟೆ ಸಮನ್ವಯ ಸಮಿತಿ ದರ ನಿಗದಿಪಡಿಸಿದ್ದು, ಶುಕ್ರವಾರ ದರ ಹೆಚ್ಚಾಗಿದೆ. ಬೆಂಗಳೂರು ವಲಯದಲ್ಲಿ 100 ಮೊಟ್ಟೆಗಳಿಗೆ 545 ರೂ., ಮೈಸೂರು ವಲಯದಲ್ಲಿ ಪ್ರತಿ 100 ಮೊಟ್ಟೆಗಳಿಗೆ 547 ರೂ. ದರ ಇದೆ.
2017 ರ ನವೆಂಬರ್ ನಲ್ಲಿ ಮೊಟ್ಟೆ ದರ 5.53 ರೂಪಾಯಿ ತಲುಪಿತ್ತು. ಗ್ರಾಹಕರಿಗೆ ಗರಿಷ್ಠ 6.55 ರೂ.ಗೆ ಮಾರಾಟ ಮಾಡಲಾಗಿತ್ತು. ಈಗ ಕೋಳಿ ಸಾಕಣೆ ಪ್ರಮಾಣ ಕಡಿಮೆಯಾಗಿದೆ. ಮೊಟ್ಟೆ ಉತ್ಪಾದನೆ ಕೂಡ ಕಡಿಮೆಯಾದ ಹಿನ್ನೆಲೆಯಲ್ಲಿ ಬೇಡಿಕೆ ಜಾಸ್ತಿಯಾಗಿದೆ.
ಕೆಲ ತಿಂಗಳ ಹಿಂದೆ ಹಕ್ಕಿ ಜ್ವರ ಕಾರಣದಿಂದ ಕೋಳಿ ಫಾರಂಗಳಲ್ಲಿ ಕೋಳಿಗಳನ್ನು ನಾಶಮಾಡಲಾಗಿತ್ತು. ಲಾಕ್ ಡೌನ್ ನಂತರ ಕಾರ್ಮಿಕರ ಕೊರತೆ ಕಂಡು ಬಂದಿದೆ. ಇದರ ಪರಿಣಾಮ ಕೋಳಿ ಸಾಕಾಣೆ ಕಡಿಮೆಯಾಗಿ ಮೊಟ್ಟೆ ಉತ್ಪಾದನೆ ಕಡಿಮೆಯಾಗಿ ದರ ಹೆಚ್ಚಳವಾಗಿದೆ ಎಂದು ಹೇಳಲಾಗಿದೆ.