ನವದೆಹಲಿ: ಅಂತರಾಷ್ಟ್ರೀಯ ದರಗಳ ಇಳಿಕೆ ಮತ್ತು ಸರ್ಕಾರದ ಸಕಾಲಿಕ ಮಧ್ಯಪ್ರವೇಶದಿಂದ ಚಿಲ್ಲರೆ ಮಾರುಕಟ್ಟೆಯಲ್ಲಿ ಖಾದ್ಯ ತೈಲ ಬೆಲೆಗಳು ಕಡಿಮೆಯಾಗಿದೆ ಎಂದು ಆಹಾರ ಕಾರ್ಯದರ್ಶಿ ಸುಧಾಂಶು ಪಾಂಡೆ ಬುಧವಾರ ಹೇಳಿದ್ದಾರೆ.
ಸರ್ಕಾರದ ಅಂಕಿಅಂಶಗಳ ಪ್ರಕಾರ, ಪ್ಯಾಕ್ ಮಾಡಿದ ಖಾದ್ಯ ತೈಲಗಳ ಸರಾಸರಿ ಚಿಲ್ಲರೆ ಬೆಲೆಗಳು ಈ ತಿಂಗಳ ಆರಂಭದಿಂದ ದೇಶಾದ್ಯಂತ ಕಡಲೆಕಾಯಿ ಎಣ್ಣೆಯನ್ನು ಹೊರತುಪಡಿಸಿ ಸ್ವಲ್ಪ ಕಡಿಮೆಯಾಗಿದೆ. ಪ್ರತಿ ಕೆಜಿಗೆ 150 ರಿಂದ 190 ರೂ. ನಡುವೆ ದರ ಇದೆ.
ಕಳೆದ ವಾರ, ಖಾದ್ಯ ತೈಲ ಸಂಸ್ಥೆಗಳಾದ ಅದಾನಿ ವಿಲ್ಮಾರ್ ಮತ್ತು ಮದರ್ ಡೈರಿ ವಿವಿಧ ಬಗೆಯ ಅಡುಗೆ ಎಣ್ಣೆಗಳ MRP(ಗರಿಷ್ಠ ಚಿಲ್ಲರೆ ಬೆಲೆ) ಅನ್ನು ಲೀಟರ್‌ಗೆ 10-15 ರೂ. ಕಡಿಮೆ ಮಾಡಿದ್ದು, ಹೊಸ MRPಗಳೊಂದಿಗೆ ಶೀಘ್ರದಲ್ಲೇ ಮಾರುಕಟ್ಟೆಗೆ ಬರಲಿವೆ ಎಂದು ಎರಡೂ ಕಂಪನಿಗಳು ತಿಳಿಸಿವೆ.
ಸರ್ಕಾರದ ಸಮಯೋಚಿತ ಮಧ್ಯಸ್ಥಿಕೆ ಮತ್ತು ಜಾಗತಿಕ ಬೆಳವಣಿಗೆಗಳಿಂದಾಗಿ ಖಾದ್ಯ ತೈಲಗಳ ಬೆಲೆ ಇಳಿಕೆ ಸಕಾರಾತ್ಮಕವಾಗಿವೆ ಎಂದು ಪಾಂಡೆ ಸುದ್ದಿಗಾರರಿಗೆ ತಿಳಿಸಿದರು.
ಖಾದ್ಯ ತೈಲಗಳು ಮಾತ್ರವಲ್ಲ, ಚಿಲ್ಲರೆ ಗೋಧಿ ಮತ್ತು ಗೋಧಿ ಹಿಟ್ಟಿನ ಬೆಲೆಗಳು ಸ್ಥಿರವಾಗಿವೆ. ಪ್ರಮುಖ ಖಾದ್ಯ ತೈಲ ಬ್ರಾಂಡ್ ಗಳು ಎಂ.ಆರ್.ಪಿ.ಯನ್ನು ಹಂತಹಂತವಾಗಿ ಇಳಿಸಿವೆ. ಇತ್ತೀಚೆಗಷ್ಟೇ ಪ್ರತಿ ಲೀಟರ್‌ಗೆ 10-15 ರೂ.ಗಳಷ್ಟು ಕಡಿತಗೊಳಿಸಿವೆ ಎಂದು ಆಹಾರ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಗ್ರಾಹಕ ವ್ಯವಹಾರಗಳ ಇಲಾಖೆಯು ಸಂಗ್ರಹಿಸಿದ ಅಂಕಿಅಂಶಗಳ ಪ್ರಕಾರ, ಶೇಂಗಾ ಎಣ್ಣೆಯ(ಪ್ಯಾಕೇಜ್ ಮಾಡಿದ) ಸರಾಸರಿ ಚಿಲ್ಲರೆ ಬೆಲೆಗಳು ಜೂನ್ 1 ರಂದು ಕೆಜಿಗೆ 188.14 ರೂ. ನಿಂದ ಜೂನ್ 21 ರಂದು 186.43 ರೂ.ಗೆ ಇಳಿದಿದೆ.
ಸಾಸಿವೆ ಎಣ್ಣೆ ದರವು ಜೂನ್ 1 ರಂದು ಕೆಜಿಗೆ 183.68 ರೂ.ನಿಂದ ಜೂನ್ 21 ರಂದು 180.85 ರೂ.ಗೆ ಕಡಿಮೆಯಾಗಿದೆ. ವನಸ್ಪತಿ ಬೆಲೆ ಕೆಜಿಗೆ 165 ರೂ. ಇದೆ.
ಸೋಯಾ ಎಣ್ಣೆಯ ಬೆಲೆ 169.65 ರೂ.ನಿಂದ 167.67 ಕ್ಕೆ ಸ್ವಲ್ಪ ಕಡಿಮೆಯಾಗಿದೆ. ಆದರೆ ಸೂರ್ಯಕಾಂತಿ ದರವು ಕೆಜಿಗೆ 193 ರಿಂದ 189.99 ಕ್ಕೆ ಸ್ವಲ್ಪ ಕುಸಿದಿದೆ.
ತಾಳೆ ಎಣ್ಣೆ ದರ ಜೂನ್ 1 ರಂದು ಕೆಜಿಗೆ 156.4 ರಿಂದ ಜೂನ್ 21 ರಂದು 152.52 ರೂ.ಗೆ ಇಳಿದಿದೆ.
ಅದಾನಿ ವಿಲ್ಮರ್ ಶನಿವಾರ ತನ್ನ ಖಾದ್ಯ ತೈಲಗಳ ಬೆಲೆಯನ್ನು ಲೀಟರ್‌ಗೆ 10 ರೂ. ಇಳಿಸಿದೆ. ಫಾರ್ಚೂನ್ ಸಂಸ್ಕರಿಸಿದ ಸೂರ್ಯಕಾಂತಿ ಎಣ್ಣೆಯ 1 ಲೀಟರ್ ಪ್ಯಾಕ್ ಎಂ.ಆರ್.ಪಿ. ಲೀಟರ್ ಗೆ 220 ರೂ.ನಿಂದ 210 ರೂ.ಗೆ ಇಳಿಕೆಯಾಗಿದೆ. ಫಾರ್ಚೂನ್ ಸೋಯಾಬೀನ್ ಮತ್ತು ಫಾರ್ಚೂನ್ ಸಾಸಿವೆ ಎಣ್ಣೆ 1 ಲೀಟರ್ ಪ್ಯಾಕ್ ಗಳ ಎಂಆರ್‌ಪಿ 205 ರೂ.ನಿಂದ 195 ರೂ.ಗೆ ಇಳಿಕೆಯಾಗಿದೆ.
ಮದರ್ ಡೈರಿ ಕಳೆದ ವಾರ ತನ್ನ ಅಡುಗೆ ಎಣ್ಣೆಗಳ ಬೆಲೆಯನ್ನು ಪ್ರತಿ ಲೀಟರ್‌ಗೆ 15 ರೂ.ನಷ್ಟು ಕಡಿಮೆಗೊಳಿಸಿದೆ.
ಧಾರಾ ಸಾಸಿವೆ ಎಣ್ಣೆ(1 ಲೀಟರ್ ಪಾಲಿ ಪ್ಯಾಕ್) ಪ್ರತಿ ಲೀಟರ್ ಗೆ 208 ರೂ.ನಿಂದ 193 ರೂ.ಗೆ ಇಳಿಕೆಯಾಗಿದೆ.
ಧಾರಾ ಸಂಸ್ಕರಿಸಿದ ಸೂರ್ಯಕಾಂತಿ ಎಣ್ಣೆ (1 ಲೀಟರ್ ಪಾಲಿ ಪ್ಯಾಕ್) ಪ್ರತಿ ಲೀಟರ್ ಗೆ 235 ರೂ.ನಿಂದ ಈಗ 220 ರೂ.ಗೆ ಮಾರಾಟವಾಗಲಿದೆ. ಧಾರಾ ಸಂಸ್ಕರಿಸಿದ ಸೋಯಾಬೀನ್ ಎಣ್ಣೆ(1 ಲೀಟರ್ ಪಾಲಿ ಪ್ಯಾಕ್) ದರ 209 ರೂ.ನಿಂದ 194 ರೂ.ಗೆ ಇಳಿಯಲಿದೆ.