ನವದೆಹಲಿ: ಏಪ್ರಿಲ್ 1 ರಿಂದ ಹೊಸ ಆರ್ಥಿಕ ನಿಯಮಗಳು ಜಾರಿಗೆ ಬರಲಿವೆ. ಹಣಕಾಸು ವಿಚಾರಗಳಿಗೆ ಸಂಬಂಧಿಸಿದಂತೆ ನೀಡಲಾಗಿರುವ ಕೆಲವು ಮಹತ್ವದ ಗಡುವು ಮಾರ್ಚ್ 31ಕ್ಕೆ ಮುಕ್ತಾಯವಾಗಲಿದೆ. ನಿಮ್ಮ ದೈನಂದಿನ ಜೀವನದಲ್ಲಿ ಬದಲಾವಣೆ ತರಲಿರುವ ಕೆಲವು ಆರ್ಥಿಕ ನಿಯಮಗಳ ಬಗ್ಗೆ ಮಾಹಿತಿ ಇಲ್ಲಿದೆ.
ಐಟಿಆರ್ ಸಲ್ಲಿಕೆ
2021 -22 ನೇ ಸಾಲಿನ ವಿಳಂಬವಾದ ಐಟಿಆರ್ ಸಲ್ಲಿಕೆಗೆ 2022ರ ಮಾರ್ಚ್ 31 ಕೊನೆಯ ದಿನವಾಗಿದೆ. ಐಟಿಆರ್ ಸಲ್ಲಿಕೆಯ ಕೊನೆಯ ದಿನ ತಪ್ಪಿಸಿಕೊಂಡವರು ವಿಳಂಬಿತ ಐಟಿಆರ್ ಸಲ್ಲಿಸಬಹುದು. ಇಲ್ಲದಿದ್ದರೆ 10,000 ರೂಪಾಯಿವರೆಗೆ ದಂಡ ವಿಧಿಸಲಾಗುತ್ತದೆ.
ಪಾನ್ -ಆಧಾರ್ ಜೋಡಣೆ
ಪಾನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಜೋಡಣೆ ಮಾಡಲು 2022ರ ಮಾರ್ಚ್ 31 ಕೊನೆಯ ದಿನವಾಗಿದೆ. ಹಿಂದೆ 2021ರ ಸೆಪ್ಟೆಂಬರ್ 30 ಕೊನೆಯ ದಿನವಾಗಿತ್ತು. ಮಾರ್ಚ್ 31 ರೊಳಗೆ ಆಧಾರ್, ಪಾನ್ ಕಾರ್ಡ್ ಜೋಡಣೆ ಮಾಡದಿದ್ದರೆ ಆದಾಯ ತೆರಿಗೆ ಕಾಯ್ದೆ ಸೆಕ್ಷನ್ ಪ್ರಕಾರ 10 ಸಾವಿರ ರೂಪಾಯಿ ದಂಡ ಅನ್ವಯವಾಗಲಿದೆ.
ಕನಿಷ್ಠ ಠೇವಣಿ ಜಮಾ
ಸುಕನ್ಯಾ ಸಮೃದ್ಧಿ ಯೋಜನೆ, ಸಾರ್ವಜನಿಕ ಭವಿಷ್ಯನಿಧಿ ಮತ್ತು ಎನ್.ಪಿ.ಎಸ್. ಮೊದಲಾದ ಉಳಿತಾಯ ಯೋಜನೆ ಖಾತೆಗಳಿಗೆ ಕನಿಷ್ಠ ಠೇವಣಿ ಜಮಾ ಮಾಡಬೇಕಿದೆ. ಇಲ್ಲವಾದಲ್ಲಿ ಅಂತಹ ಖಾತೆಗಳು ನಿಷ್ಕ್ರಿಯವೆಂದು ಪರಿಗಣಿಸಲಿದ್ದು, ದಂಡ ಕೂಡ ಪಾವತಿಸಬೇಕಾಗಬಹುದು.
ಕೆವೈಸಿ ಪರಿಷ್ಕರಣೆ
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕ್ ಖಾತೆಗಳ ಕೆವೈಸಿ ಪರಿಷ್ಕರಣೆ ಗಡುವನ್ನು ಮಾರ್ಚ್ 31ರ ವರೆಗೆ ವಿಸ್ತರಿಸಿದ್ದು, ಗ್ರಾಹಕರು ಈ ದಿನಾಂಕದೊಳಗೆ ಕೆವೈಸಿ ಪರಿಷ್ಕರಣೆ ಮಾಡಿಕೊಳ್ಳಬೇಕಿದೆ. ಇಲ್ಲದಿದ್ದರೆ ಖಾತೆ ನಿಷ್ಕ್ರಿಯವಾಗುವ ಸಾಧ್ಯತೆ ಇದೆ. ಈ ಮೊದಲು 2021ರ ಡಿಸೆಂಬರ್ 31ರವರೆಗೆ ಬ್ಯಾಂಕ್ ಖಾತೆಗಳ ಕೆವೈಸಿ ಪರಿಷ್ಕರಣೆಗೆ ಗಡುವು ನೀಡಲಾಗಿತ್ತು. ಅದನ್ನು 2022ರ ಮಾರ್ಚ್ 31ರವರೆಗೆ ವಿಸ್ತರಿಸಲಾಗಿದೆ.
ಗೃಹ ಸಾಲದ ಬಡ್ಡಿ ಸಬ್ಸಿಡಿ ಸೌಲಭ್ಯ
ಕೇಂದ್ರ ಸರ್ಕಾರ ಪ್ರಧಾನಮಂತ್ರಿ ಅವಾಸ್ ಯೋಜನೆ ಅಡಿಯಲ್ಲಿ ಗೃಹ ಸಾಲದ ಬಡ್ಡಿ ಸಬ್ಸಿಡಿ ಸೌಲಭ್ಯ ಪಡೆಯಲು ಅರ್ಜಿ ಸಲ್ಲಿಕೆಗೆ ಮಾರ್ಚ್ 31 ಕೊನೆಯ ದಿನವಾಗಿದೆ.
ಕಿಸಾನ್ ಖಾತೆ ಕೆವೈಸಿ
ಪ್ರಧಾನಮಂತ್ರಿ ಕಿಸಾನ್ ಯೋಜನೆ ಫಲಾನುಭವಿ ರೈತರು ಆನ್ಲೈನ್ ಅಥವಾ ಆಫ್ ಲೈನ್ ಮೂಲಕ ಮಾರ್ಚ್ 31 ರೊಳಗೆ ಕೆವೈಸಿ ಅಪ್ಡೇಟ್ ಮಾಡಬೇಕಿದೆ. ಕೆವೈಸಿ ಅಪ್ಡೇಟ್ ಮಾಡಿದರೆ ಮಾತ್ರ ಮುಂದಿನ ಕಂತಿನ ಹಣ ಬ್ಯಾಂಕ್ ಖಾತೆಗೆ ಜಮಾ ಆಗುತ್ತದೆ. ಯೋಜನೆಗೆ ನೊಂದಾಯಿಸಿದ ರೈತರು ಕಡ್ಡಾಯವಾಗಿ ಇ-ಕೆವೈಸಿ ಮಾಡಿಸಬೇಕಿದೆ.