ಬೆಂಗಳೂರು: ಕೃಷಿ ಉತ್ಪನ್ನಗಳಿಗೆ ಇ-ಕಾಮರ್ಸ್ ವೇದಿಕೆಯಲ್ಲಿ ಮಾರಾಟಕ್ಕೆ ಅವಕಾಶ ಕಲ್ಪಿಸಬೇಕೆಂಬುದರ ಕುರಿತಾಗಿ ಫ್ಲಿಪ್ ಕಾರ್ಟ್ ಮುಖ್ಯಸ್ಥರೊಂದಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತುಕತೆ ನಡೆಸಿದ್ದಾರೆ.
ಫ್ಲಿಪ್ಕಾರ್ಟ್ ಸಂಸ್ಥೆಯ ಕಾರ್ಪೊರೇಟ್ ವ್ಯವಹಾರದ ಮುಖ್ಯಸ್ಥ ರಜನೀಶ್ ಕುಮಾರ್ ಸಿಎಂ ಗೃಹಕಚೇರಿ ಕೃಷ್ಣಾದಲ್ಲಿ ಭೇಟಿಯಾದ ಸಂದರ್ಭದಲ್ಲಿ ಚರ್ಚೆ ನಡೆಸಿದ ಸಿಎಂ ಬೊಮ್ಮಾಯಿ, ಕೃಷಿ ಉತ್ಪನ್ನಗಳ ಮಾರಾಟಕ್ಕೆ ಇ-ಕಾಮರ್ಸ್ ವೇದಿಕೆಯಲ್ಲಿ ಅವಕಾಶ ಸಿಗಬೇಕು. ಅದರ ಲಾಭ ಉತ್ಪಾದಕರಿಗೆ ದೊರೆಯಬೇಕು ಎಂದು ಹೇಳಿದ್ದಾರೆ.
ರೈತರಿಗೆ ಕೃಷಿ ಉತ್ಪನ್ನಗಳ ಮೌಲ್ಯವರ್ಧನೆಯೊಂದಿಗೆ ಇ-ಕಾಮರ್ಸ್ ವೇದಿಕೆಯ ಮೂಲಕ ಮಾರುಕಟ್ಟೆ ಬೇಡಿಕೆಗಳ ಕುರಿತು ಮಾಹಿತಿ ಸಿಗಬೇಕು. ಇದರಿಂದ ರೈತರಿಗೆ ಅನುಕೂಲವಾಗುತ್ತದೆ ಎಂದು ಹೇಳಿದ್ದಾರೆ.
ರಾಜ್ಯದಲ್ಲಿ 10 ಕೃಷಿ ಹವಾಮಾನ ವಲಯಗಳಿವೆ. ಜೋಳ, ಎಣ್ಣೆಬೀಜ, ಧಾನ್ಯ, ಸಾಂಬಾರ, ಪದಾರ್ಥ, ಕಾಫಿ ಮೊದಲಾದ ಕೃಷಿ ಉತ್ಪನ್ನಗಳ ಜೊತೆಗೆ ಕುಶಲಕರ್ಮಿಗಳು, ನೇಕಾರರಿಗೆ ಪ್ರೋತ್ಸಾಹ ಸಿಗಬೇಕು. ಇವುಗಳಿಗೆ ಮಾರುಕಟ್ಟೆ ಒದಗಿಸುವ ಕುರಿತಂತೆ ಕೈಜೋಡಿಸಬೇಕು. ರಾಜ್ಯ ಸರ್ಕಾರದೊಂದಿಗೆ ಒಪ್ಪಂದ ಮಾಡಿಕೊಳ್ಳಬೇಕು ಎಂದು ತಿಳಿಸಿದ್ದಾರೆ.