ನವದೆಹಲಿ: ಚಾಲನಾ ಪರವಾನಿಗೆ ಪಡೆಯುವ ಮೊದಲು ಟೆಸ್ಟ್ ಕಡ್ಡಾಯವಾಗಿದೆ. ಟೆಸ್ಟ್ ಇಲ್ಲದೇ ಸುಲಭವಾಗಿ ಡಿಎಲ್ ಪಡೆದುಕೊಳ್ಳಲು ಮಾಹಿತಿ ಇಲ್ಲಿದೆ.
ಡ್ರೈವಿಂಗ್ ಟೆಸ್ಟ್ ಇಲ್ಲದೆಯೇ ಡಿಎಲ್ ಪಡೆಯುವ ಅವಕಾಶವನ್ನು ನೀಡಲಾಗುತ್ತಿದೆ. ಅಪಘಾತ ನಿಯಂತ್ರಿಸುವ ಉದ್ದೇಶದಿಂದ ಉತ್ತಮ ಗುಣಮಟ್ಟದ ಚಾಲನಾ ತರಬೇತಿ ನೀಡಲು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಡ್ರೈವಿಂಗ್ ಟ್ರೈನಿಂಗ್ ಕೇಂದ್ರಗಳಿಗೆ ಮಾನ್ಯತೆ ನೀಡಿ ಪ್ರಮಾಣಪತ್ರಗಳನ್ನು ಒದಗಿಸಲಾಗುತ್ತದೆ. ಈ ಕೇಂದ್ರಗಳಲ್ಲಿ ಯಶಸ್ವಿಯಾಗಿ ತರಬೇತಿ ಪಡೆದವರು ಡ್ರೈವಿಂಗ್ ಲೈಸೆನ್ಸ್ ಪಡೆಯುವಾಗ ಟೆಸ್ಟ್ ಕೊಡಬೇಕಿಲ್ಲ.
ತರಬೇತಿ ಕೇಂದ್ರಗಳಲ್ಲಿ ಪರೀಕ್ಷೆಗಳನ್ನು ಪೂರ್ಣಗೊಳಿಸಿ ಪ್ರಮಾಣಪತ್ರ ಕೊಡಲಾಗುತ್ತದೆ. ಡ್ರೈವಿಂಗ್ ಟ್ರೈನಿಂಗ್ ಸೆಂಟರ್ ಗಳಲ್ಲಿ ತರಬೇತಿ ಪಡೆದು ಪಾಸಾದವರಿಗೆ ಟೆಸ್ಟ್ ನಿಂದ ವಿನಾಯಿತಿ ನೀಡಲಾಗುತ್ತದೆ. ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ವೆಬ್ಸೈಟ್ನಲ್ಲಿ ಕರಡು ಅಧಿಸೂಚನೆ ಪ್ರಕಟಿಸಲಾಗಿದೆ. ಈ ನಿಯಮ ಇನ್ನೂ ಕರಡು ರೂಪದಲ್ಲಿದ್ದರೂ ಚಾಲನಾ ಪರವಾನಿಗೆ ಪಡೆಯುವುದನ್ನು ಸುಲಭಗೊಳಿಸಲಿದ್ದು, ಶೀಘ್ರವೇ ಜಾರಿಗೆ ಬರಲಿದೆ ಎಂದು ಹೇಳಲಾಗಿದೆ.