ನಿಮ್ಮ ಡೆಬಿಟ್ ಕಾರ್ಡ್‌ಗಳ ಭದ್ರತೆ ಹಾಗೂ ಸುರಕ್ಷತೆ ಸಂಬಂಧ ನಿಮ್ಮ ಮೇಲೆ ಬಹಳ ಜವಾಬ್ದಾರಿ ಇರುತ್ತದೆ. ನಿಮ್ಮ ಎಟಿಎಂ ಕಾರ್ಡ್‌ಗಳ ಪಾಸ್‌ವರ್ಡ್, ಪಿನ್‌ಗಳನ್ನು ಯಾರೊಂದಿಗೂ ಶೇರ್ ಮಾಡದೇ ಇರುವುದರಿಂದ ಹಿಡಿದು ಬಹಳಷ್ಟು ಸುರಕ್ಷತಾ ಕ್ರಮಗಳನ್ನು ನೀವು ತೆಗೆದುಕೊಳ್ಳಬೇಕಾಗುತ್ತದೆ.
ಎಟಿಎಂಗಳಿಂದ ನಗದು ಹಿಂಪಡೆಯುವ ವೇಳೆ ಅನುಸರಿಸಬೇಕಾದ ಐದು ಒಳ್ಳೆಯ ಅಭ್ಯಾಸಗಳ ಪಟ್ಟಿ ಇಂತಿದೆ:
1. ಎಟಿಂಎಂ ಒಳಗೆ ಪಡೆದ ದುಡ್ಡನ್ನು ಅಲ್ಲೇ ನಿಂತು ಎಣಿಸಬಾರದು ಎಂದು ಸಾಮಾನ್ಯವಾಗಿ ಹೇಳಲಾಗುತ್ತದೆ. ಆದರೂ ಸಹ ಪಂಚ್ ಮಾಡಲಾದ ಅಮೌಂಟ್‌ಗಿಂತಲೂ ಎಟಿಎಂ ಯಂತ್ರ ಡಿಸ್ಪೆನ್ಸ್ ಮಾಡಿದ ಮೊತ್ತ ವ್ಯತ್ಯಾಸವಾಗಿರುತ್ತದೆ ಎಂಬ ಬಹಳಷ್ಟು ದೂರುಗಳನ್ನು ಸಹ ಆಗಾಗ ಕೇಳುತ್ತಲೇ ಇರುತ್ತೇವೆ. ಇಂಥ ಸಂದರ್ಭದಲ್ಲಿ ಬ್ಯಾಂಕಿನಲ್ಲಿ ದೂರು ದಾಖಲಿಸುವ ಆಯ್ಕೆ ನಿಮ್ಮದಾಗಿರುತ್ತದೆ. ಆದರೂ ಜಾಗೃತೆಯಿಂದ ಇರುವುದು ಉತ್ತಮ.
2. ಎಟಿಎಂ ಯಂತ್ರದಲ್ಲಿ ವ್ಯವಹಾರ ಮುಗಿದ ಬಳಿಕ ಅಲ್ಲಿಂದ ಹೊರಡುವ ಮುನ್ನ ’ಕ್ಯಾನ್ಸಲ್’ ಬಟನ್ ಒತ್ತುವುದು ಒಳ್ಳೆಯ ಅಭ್ಯಾಸ.
3. ಎಟಿಂಎಂ ಯಂತ್ರದಲ್ಲಿ ನಿಮ್ಮ ಪಾಸ್‌ವರ್ಡ್ ಹಾಗೂ ಪಿನ್‌ಗಳನ್ನು ಫೀಡ್ ಮಾಡುವ ಸಂದರ್ಭದಲ್ಲಿ ನಿಮ್ಮ ದೇಹ ಆ ಯಂತ್ರವನ್ನು ಪೂರ್ಣವಾಗಿ ಕವರ್ ಮಾಡಿದೆ ಎಂಬಂತೆ ನಿಲ್ಲಿ.
4. ಕಾಲ ಕಾಲಕ್ಕೆ ವ್ಯವಹಾರದ ವಿವರಗಳನ್ನು ಮಿನಿ ಸ್ಟೇಟ್‌ಮೆಂಟ್ ಬ್ಯಾಲೆನ್ಸ್ ರೂಪದಲ್ಲಿ ಚೆಕ್ ಮಾಡುತ್ತಲೇ ಇರಿ. ಈ ಮೂಲಕ ನಿಮ್ಮ ವಹಿವಾಟಿನ ಲೆಕ್ಕಾಚಾರ ಸ್ಪಷ್ಟವಾಗಿ ಸಿಗುವುದಲ್ಲದೇ, ಅನುಮಾನಾಸ್ಪದ ವಹಿವಾಟುಗಳು ನಡೆದಿದ್ದಲ್ಲಿ ನಿಮ್ಮ ಗಮನಕ್ಕೆ ಕೂಡಲೇ ಬರುತ್ತದೆ.
5. ಕೊನೆಯದಾಗಿ, ವಹಿವಾಟು ಮುಗಿದ ಬಳಿಕವೂ ಎಟಿಎಂ ಕಿಯಾಸ್ಕ್‌ನಲ್ಲಿ ಹೆಚ್ಚು ಕಾಲ ಕಳೆಯಬೇಡಿ. ಸರತಿಯಲ್ಲಿ ಬಹಳಷ್ಟು ಮಂದಿ ಕಾಯುತ್ತಾ ನಿಂತಿರುತ್ತಾರೆ.