ಹೈದರಾಬಾದ್: ಗ್ಯಾಸ್ ಸಿಲಿಂಡರ್ ತರುವ ವ್ಯಕ್ತಿಗೆ 30, 40 ರೂಪಾಯಿ ಕೊಡಬೇಕಿಲ್ಲವೆಂದು ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ತಿಳಿಸಿದೆ.
ಮನೆಗೆ ಗ್ಯಾಸ್ ಸಿಲಿಂಡರ್ ತಂದು ಕೊಡುವ ಡೆಲಿವರಿ ಬಾಯ್ ಗಳು ಸಿಲಿಂಡರ್ ಹಣದ ಜೊತೆಗೆ ಹೆಚ್ಚುವರಿಯಾಗಿ 50 ರೂಪಾಯಿವರೆಗೂ ಡೆಲಿವರಿ ಚಾರ್ಜ್ ಕೇಳುತ್ತಾರೆ ಎಂಬ ದೂರುಗಳ ಹಿನ್ನೆಲೆಯಲ್ಲಿ ಹಿಂದುಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಮಾಹಿತಿ ನೀಡಿದ್ದು, ಸಿಲಿಂಡರ್ ತಂದು ಕೊಡುವ ವ್ಯಕ್ತಿಗೆ ಹಣ ಕೊಡಬೇಕಿಲ್ಲ. ಗ್ರಾಹಕರಿಗೆ ಸಿಲಿಂಡರ್ ತಲುಪಿಸುವುದು ಏಜೆನ್ಸಿಯ ಕರ್ತವ್ಯವಾಗಿದೆ ಎಂದು ತಿಳಿಸಿದೆ.
ಎಲ್ಪಿಜಿ ವಿತರಣಾ ಶುಲ್ಕ ಕಡ್ಡಾಯವಲ್ಲ ಎಂದು ಹಿಂದುಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಹೇಳಿದೆ. ಮಾಹಿತಿ ಹಕ್ಕು ಮೂಲಕ ಹೈದರಾಬಾದ್ ನಿವಾಸಿಯೊಬ್ಬರು ಅರ್ಜಿ ಸಲ್ಲಿಸಿದ್ದು, ಈ ಬಗ್ಗೆ ಉತ್ತರಿಸಿದ ಹೆಚ್.ಪಿ.ಸಿ.ಎಲ್. ಗ್ರಾಹಕರಿಗೆ ಸಿಲಿಂಡರ್ ತಲುಪಿಸುವುದು ಏಜೆನ್ಸಿ ಜವಾಬ್ದಾರಿಯಾಗಿದೆ. ಡೆಲಿವರಿ ಬಾಯ್ ಗಳು ಹೆಚ್ಚುವರಿ ಹಣ ಪಡೆಯದೆ ಸಿಲಿಂಡರ್ ತಲುಪಿಸಬೇಕು. ಬಿಲ್ ನಲ್ಲಿ ಇರುವಷ್ಟು ಹಣ ಮಾತ್ರ ಪಡೆಯಬೇಕು ಎಂದು ತಿಳಿಸಿದ್ದು, ಹೆಚ್ಚುವರಿ ಹಣ ಕೇಳಿದರೆ ನಿರಾಕರಿಸಬಹುದು ಎಂದು ಹೇಳಲಾಗಿದೆ.