ನವದೆಹಲಿ: ದೀಪಾವಳಿಯ ಸಂದರ್ಭದಲ್ಲಿ ಸೂರತ್ ಮೂಲದ ಕಂಪನಿ ಅಲಯನ್ಸ್ ಗ್ರೂಪ್ ತನ್ನ ಸಿಬ್ಬಂದಿಗೆ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಉಡುಗೊರೆಯಾಗಿ ನೀಡಿದೆ.
ಹೆಚ್ಚುತ್ತಿರುವ ಇಂಧನ ಬೆಲೆ ದೃಷ್ಟಿಯಿಂದ ನಾವು ನಮ್ಮ ಉದ್ಯೋಗಿಗಳಿಗೆ ಎಲೆಕ್ಟ್ರಿಕ್ ವಾಹನಗಳನ್ನು ಉಡುಗೊರೆಯಾಗಿ ನೀಡಲು ನಿರ್ಧರಿಸಿದ್ದೇವೆ ಎಂದು ಕಂಪನಿಯ ನಿರ್ದೇಶಕ ಸುಭಾಷ್ ದಾವರ್ ಹೇಳಿದ್ದಾರೆ.
ಬೆಲೆ ಏರಿಕೆ ಸಮಸ್ಯೆಯು ಕಂಪನಿಯ ಹಣಕಾಸು ನಿಲುವಿನ ಮೇಲೆ ಪರಿಣಾಮ ಬೀರಿದೆ. ಇದು ಇಂಧನದ ಮೇಲಿನ ವೆಚ್ಚವನ್ನು ಉಳಿಸುವುದು ಮಾತ್ರವಲ್ಲದೆ, ನಮ್ಮ ಕಂಪನಿಯು ಪರಿಸರ ಸಂರಕ್ಷಣೆಗೆ ಕೊಡುಗೆ ನೀಡಲು ಅನುವು ಮಾಡಿಕೊಡಲಿದೆ ಎಂದು ಅವರು ಹೇಳಿದರು.
ಸುಭಾಷ್ ಅವರು ಪರಿಸರ ಕಾಳಜಿ ಹೊಂದಿದ್ದು, ಪ್ರಕೃತಿಯ ಮಡಿಲಲ್ಲಿ ಬದುಕಲು ಇಷ್ಟಪಡುತ್ತಾರೆ. ಪರಿಸರ ಸಂರಕ್ಷಣೆಗೆ ಸಾಧ್ಯವಿರುವ ಎಲ್ಲ ಕ್ರಮಗಳನ್ನು ಕೈಗೊಳ್ಳುವ ಹಂಬಲ ಅವರದ್ದಾಗಿದೆ. ಕಂಪನಿಯು ತನ್ನ 35 ಉದ್ಯೋಗಿಗಳಿಗೆ ದೀಪಾವಳಿ ಉಡುಗೊರೆಯಾಗಿ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ನೀಡಿದೆ ಎಂದು ವ್ಯವಹಾರವನ್ನು ನೋಡಿಕೊಳ್ಳುತ್ತಿರುವ ಸುಭಾಷ್ ದಾವರ್ ಅವರ ಪುತ್ರ ಚಿರಾಗ್ ದಾವರ್ ಹೇಳಿದ್ದಾರೆ.
ಹೆಚ್ಚುತ್ತಿರುವ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಪರಿಗಣಿಸಿ, ಕಂಪನಿಯು ತನ್ನ ಸಿಬ್ಬಂದಿಗೆ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ನೀಡಲು ನಿರ್ಧರಿಸಿದೆ. ಗುರುವಾರ ದೀಪಾವಳಿ ಆಚರಣೆಯ ಅಂಗವಾಗಿ ಈ ಸ್ಕೂಟರ್‌ಗಳನ್ನು ಉದ್ಯೋಗಿಗಳಿಗೆ ನೀಡಲಾಗಿದೆ. ಇದರಿಂದ ಕಂಪನಿಯ ಸಿಬ್ಬಂದಿ ಹರ್ಷಗೊಂಡಿದ್ದು, ಇದು ಇನ್ನೂ ಹೆಚ್ಚು ಕೆಲಸ ಮಾಡಲು ಪ್ರೇರೇಪಿಸಿದೆ ಎಂದು ತಿಳಿಸಿದ್ದಾರೆ.