2025ನೇ ಸಾಲಿಗಾಗಿ ಜ.01 ರಿಂದ ಡಿ.31 ರವರೆಗೆ ವಿಕಲಚೇತನರ ರಿಯಾಯಿತಿ ಬಸ್ ಪಾಸ್ ಗಳನ್ನು ಮಾನ್ಯತೆ ಇರುವಂತೆ ಫಲಾನುಭವಿಗಳು ನವೀಕರಣ ಮಾಡಿಕೊಳ್ಳಬೇಕು ಎಂದು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ಬಳ್ಳಾರಿ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ಇನಾಯತ್ ಬಾಗ್ಬಾನ್ ಅವರು ತಿಳಿಸಿದ್ದಾರೆ.
ವಿಕಲಚೇತನರ ರಿಯಾಯಿತಿ ಬಸ್ ಪಾಸ್ ಗಳನ್ನು ನವೀಕರಣ ಮಾಡಿಕೊಳ್ಳಲು ಸಾಕಷ್ಟು ಕಾಲಮಿತಿ ನೀಡುವ ಉದ್ದೇಶದಿಂದ 2024 ನೇ ಸಾಲಿನಲ್ಲಿ ವಿತರಿಸಲಾಗಿರುವ ಅಂದರೆ 2024ರ ಡಿ.31ರ ವರೆಗೆ ಮಾನ್ಯತೆ ಇರುವ ವಿಕಲಚೇತನರ ಪಾಸ್ ಗಳನ್ನು ನವೀಕರಿಸದೇ 2025ರ ಫೆ.28ರ ವರೆಗೆ ಮಾನ್ಯತೆ ನೀಡಲಾಗಿದ್ದು, ಆ ದಿನಾಂಕದವರೆಗೆ ವಿಕಲಚೇತನರು ಸಂಸ್ಥೆಯ ವಾಹನಗಳಲ್ಲಿ ಪ್ರಯಾಣಿಸಲು ಅವಕಾಶ ನೀಡಲಾಗಿದೆ.
2024ನೇ ಸಾಲಿನಲ್ಲಿ ವಿತರಣೆ ಮಾಡಿದ ವಿಕಲಚೇತನರ ರಿಯಾಯಿತಿ ದರದ ಬಸ್ ಪಾಸ್ ಗಳನ್ನು 06 ಜನವರಿ 2025 ರಿಂದ 28 ಫೆಬ್ರವರಿ 2025 ರ ಒಳಗೆ ಎಲ್ಲಾ ಸೂಕ್ತ ದಾಖಲಾತಿಗಳೊಂದಿಗೆ ಸೇವಾಸಿಂಧು ಪೋರ್ಟಲ್ ನಲ್ಲಿ ಅರ್ಜಿ ಸಲ್ಲಿಸಿ, ಪಾಸ್ ಶುಲ್ಕ ರೂ.660 ಗಳನ್ನು ಪಾವತಿಸಿ, ಬಳ್ಳಾರಿ ಕೇಂದ್ರೀಯ ಬಸ್ ನಿಲ್ದಾಣ ಹಾಗೂ ಸಿರುಗುಪ್ಪ, ಕುರುಗೋಡು, ಸಂಡೂರು ಘಟಕಗಳಲ್ಲಿ ವಿಕಲಚೇತನ ಫಲಾನುಭವಿಗಳು ನವೀಕರಣ ಮಾಡಿಸಿಕೊಳ್ಳಬಹುದಾಗಿದೆ.ಫೆ.28 ರ ನಂತರ ಬರುವ ಬಸ್ ಪಾಸ್ಗಳನ್ನು ನವೀಕರಿಸಲಾಗುವುದಿಲ್ಲ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.