ನಾಡಹಬ್ಬ ದಸರಾ ಮುನ್ನಾ ದಿನ ಕೇಂದ್ರ ಸರ್ಕಾರ ಸಾಲಗಾರರಿಗೆ ದೊಡ್ಡ ಗಿಫ್ಟ್ ನೀಡಿದೆ. ಎರಡು ಕೋಟಿ ರೂ.ಗಳ ವರೆಗಿನ ಸಾಲದ ಮೇಲಿನ ಚಕ್ರ ಬಡ್ಡಿಯನ್ನು ವಜಾಗೊಳಿಸುವ ಕೇಂದ್ರ ಸರ್ಕಾರದ ನಿರ್ಣಯವು ಮಾರ್ಚ್ 1 – ಆಗಸ್ಟ್ 31ರ ವರೆಗಿನ ಅವಧಿಗೆ ಅನ್ವಯವಾಗಲಿದೆ.
ಶಿಕ್ಷಣ, ಗೃಹ, ಗ್ರಾಹಕ ಬಳಕೆ ವಸ್ತುಗಳು, ವಾಹನ, ಕ್ರೆಡಿಟ್ ಕಾರ್ಡ್, MSME ಸಾಲಗಳ ಮೇಲೆ ಆರ್‌ಬಿಐ ನಿಯಂತ್ರಿತ ಹಣಕಾಸು ಸಂಸ್ಥೆಗಳಿಂದ ಪಡೆದ ಎರಡು ಕೋಟಿ ರೂ.ಗಳವರೆಗಿನ ಸಾಲದ ಮೇಲೆ ಆರು ತಿಂಗಳ ಮಟ್ಟದ ಚಕ್ರ ಬಡ್ಡಿಯನ್ನು ಸರ್ಕಾರ ಮನ್ನಾ ಮಾಡಿದೆ.
ಒಂದು ವೇಳೆ ನೀವೇನಾದರೂ ಸಾಲಗಾರರಾಗಿದ್ದು, ಇದೇ ಅವಧಿಯಲ್ಲಿ ಚಕ್ರ ಬಡ್ಡಿಯನ್ನು ಪಾವತಿ ಮಾಡಿದಲ್ಲಿ, ಬಡ್ಡಿ & ಚಕ್ರ ಬಡ್ಡಿ ನಡುವಿನ ವ್ಯತ್ಯಾಸದ ಹಣವು ನಿಮ್ಮ ಖಾತೆಗೆ ಕ್ಯಾಶ್‌ಬ್ಯಾಕ್ ರೂಪದಲ್ಲಿ ಬಂದು ಸೇರಲಿದೆ.
ಒಂದು ವೇಳೆ ನೀವು ಒಂದು ಕೋಟಿ ರೂ.ಗಳನ್ನು ವಾರ್ಷಿಕ 8% ಬಡ್ಡಿದರದಲ್ಲಿ ಪಡೆದಿದ್ದೇ ಆದಲ್ಲಿ, ಆರು ತಿಂಗಳ (ಮಾರ್ಚ್ 1 – ಆಗಸ್ಟ್ 31) ಮಟ್ಟಿಗೆ ಬಡ್ಡಿಯ ರೂಪದಲ್ಲಿ 4 ಲಕ್ಷ ರೂ.ಗಳನ್ನು ಪಾವತಿ ಮಾಡಬೇಕಾಗುತ್ತದೆ. ಚಕ್ರ ಬಡ್ಡಿಯೇ 16,329 ರೂಗಳಷ್ಟಿರುತ್ತದೆ. ಇಂಥ ಸಂದರ್ಭದಲ್ಲಿ ನೀವು 16,000ರೂ.ಗಳ ಚಕ್ರಬಡ್ಡಿ ಪಾವತಿ ಮಾಡಬೇಕಾದ ಅಗತ್ಯ ಇರುವುದಿಲ್ಲ. ಈ ಬಡ್ಡಿ ಮನ್ನಾ ಸ್ಕೀಂಗೆಂದು ಕೇಂದ್ರ ಸರ್ಕಾರ 6,500 ಕೋಟಿ ರೂಗಳನ್ನು ವ್ಯಯ ಮಾಡುತ್ತಿದೆ.