ದೇಶದ ಜನತೆಯನ್ನು ಮಹಾ ಮಾರಿಯಾಗಿ ಕಾಡುತ್ತಿರುವ ಕೊರೊನಾ ನಿಯಂತ್ರಣಕ್ಕೆ ಸಾಮಾಜಿಕ ಅಂತರ ಪಾಲಿಸುವುದು ಹಾಗೂ ಮಾಸ್ಕ್ ಧರಿಸುವುದು ಅತ್ಯಗತ್ಯವಾಗಿದೆ. ಹೀಗಾಗಿ ಸಾಮಾನ್ಯ ಜನತೆ, ಮಾರುಕಟ್ಟೆಯಲ್ಲಿ ಸಿಗುವ ಸರ್ಜಿಕಲ್ ಮಾಸ್ಕ್ ಅಥವಾ ಮನೆಯಲ್ಲೇ ತಯಾರಿಸಿದ ಮಾಸ್ಕ್ ಧರಿಸುತ್ತಿದ್ದರೆ ಉಳ್ಳವರು ಇದರಲ್ಲೂ ವಿಶೇಷತೆ ಮೆರೆಯುತ್ತಿದ್ದಾರೆ.
ಹೌದು, ಈ ಹಿಂದೆ ವ್ಯಕ್ತಿಯೊಬ್ಬರು ಬೆಳ್ಳಿಯಿಂದ ಮಾಸ್ಕ್ ತಯಾರಿಸಿದ್ದು, ಸುದ್ದಿಯಾಗಿತ್ತು. ಕೊರೊನಾ ಕಾಲದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಡುತ್ತಿರುವ ವಧು – ವರನಿಗಾಗಿ ಈ ಮಾಸ್ಕ್ ತಯಾರಿಸಿದ್ದಾಗಿ ಅವರು ಹೇಳಿಕೊಂಡಿದ್ದರು. ಇದಾದ ಬಳಿಕ ಪುಣೆ ಮೂಲದ ಆಭರಣ ಪ್ರಿಯ ವ್ಯಕ್ತಿಯೊಬ್ಬರು ಚಿನ್ನದಿಂದ ಮಾಸ್ಕ್ ಮಾಡಿಸಿಕೊಂಡಿದ್ದರು.
ಬೆಳ್ಳಿ – ಚಿನ್ನ ಮಾಸ್ಕ್ ಬಳಿಕ ಇದೀಗ ವಜ್ರದ ಮಾಸ್ಕ್ ಸುದ್ದಿಯಾಗತೊಡಗಿದ್ದು, ಗುಜರಾತಿನ ಸೂರತ್ ಆಭರಣ ವ್ಯಾಪಾರಿಯೊಬ್ಬರು ವಜ್ರದ ಹರಳುಗಳಿಂದ ಕೂಡಿದ ಮಾಸ್ಕ್ ತಯಾರಿಸಿದ್ದಾರೆ. 1.5 ಲಕ್ಷ ರೂ. ಗಳಿಂದ 4 ಲಕ್ಷ ರೂಪಾಯಿಗಳವರೆಗೆ ಇದರ ಬೆಲೆಯಿದ್ದು, ಗ್ರಾಹಕರೊಬ್ಬರು ಮದುವೆ ಸಂದರ್ಭದಲ್ಲಿ ವಧು – ವರನಿಗೆ ವಜ್ರದ ಮಾಸ್ಕ್ ತಯಾರಿಸಲು ಕೇಳಿಕೊಂಡಾಗ ಇದನ್ನು ಆರಂಭಿಸಿರುವುದಾಗಿ ಅವರು ತಿಳಿಸಿದ್ದಾರೆ.