500 ರೂ. ಹಾಗೂ 1000 ರೂ.ಗಳ ನೋಟುಗಳನ್ನು ಅಪನಗದೀಕರಣ ಮಾಡಿ ನಾಲ್ಕು ವರ್ಷಗಳು ಕಳೆದರೂ ಸಹ ದೇಶಾದ್ಯಂತ ಸಣ್ಣಪುಟ್ಟ ವ್ಯವಹಾರಗಳನ್ನು ಮಾಡಲು ನೋಟುಗಳನ್ನೇ ಇನ್ನೂ ಬಳಸಲಾಗುತ್ತಿದೆ.
ದಿನಸಿ ಸಾಮಾನುಗಳ ಖರೀದಿ, ಮನೆಗೆಲಸದವರ ಸಂಬಳ ಕೊಡುವಂಥ ವ್ಯವಹಾರಗಳಿಗೆ ನೋಟುಗಳನ್ನೇ ಹೆಚ್ಚು ಬಳಕೆ ಮಾಡಲಾಗುತ್ತಿದೆ ಎಂದು ಲೋಕಲ್ ಸರ್ಕಲ್ಸ್ ಎಂಬ ಸಂಸ್ಥೆ ಮಾಡಿದ ಸಮೀಕ್ಷೆಯಿಂದ ತಿಳಿದುಬಂದಿದೆ.
ಪ್ರತಿನಿತ್ಯ 10,000 ರೂ.ಗಳಿಗಿಂತ ದೊಡ್ಡ ಮೊತ್ತವನ್ನು ಕ್ಯಾಶ್ ಮೂಲಕ ಪಾವತಿ ಮಾಡಬಾರದು ಎಂದು ಆದಾಯ ತೆರಿಗೆ ಕಾನೂನು ಸ್ಪಷ್ಟವಾಗಿ ತಿಳಿಸಿದೆ. ಇದೇ ವೇಳೆ ರಸೀದಿ ಇಲ್ಲದೇ ಕ್ಯಾಶ್ ಮೂಲಕ ಪಾವತಿ ಮಾಡುವ ಸಂಬಂಧ ಅನೇಕ ರೀತಿಯ ಕಾನೂನುಗಳನ್ನು ತರಲಾಗಿದೆ.
ಆರ್‌ಬಿಐ ಕೊಡಮಾಡುವ ಮಾಹಿತಿ ಪ್ರಕಾರ, ಅಕ್ಟೋಬರ್ 2020ರಲ್ಲಿ ದೇಶಾದ್ಯಂತ ಡಿಜಿಟಲ್ ಪಾವತಿಯ ಟ್ರೆಂಡ್ ಹೆಚ್ಚಿದೆ. 2015-2020ರ ನಡುವಿನ ಐದು ವರ್ಷಗಳ ಅವಧಿಯಲ್ಲಿ ಡಿಜಿಟಲ್ ಪಾವತಿಯ ಟ್ರೆಂಡ್‌ನಲ್ಲಿ ವಾರ್ಷಿಕ ಸರಾಸರಿ 55.1 ಪ್ರತಿಶತದಷ್ಟು ಏರಿಕೆಯಾಗುತ್ತಲೇ ಬಂದಿದೆ. ಯುಪಿಐ-ಆಧರಿತ ವ್ಯವಹಾರಗಳ ಸಂಖ್ಯೆ ಇದೇ ಅಕ್ಟೋಬರ್ ತಿಂಗಳ ಅಂತ್ಯ ಹೊತ್ತಿಗೆ 207 ಕೋಟಿಯಷ್ಟು ತಲುಪಿದೆ.