ನವದೆಹಲಿ: ದೆಹಲಿಯಲ್ಲಿ ಹೋಟೆಲ್, ರೆಸ್ಟೋರೆಂಟ್, ಸಾರಿಗೆ ಸೇರಿದಂತೆ 300 ಉದ್ಯಮಗಳಿಗೆ ದಿನದ 24 ಗಂಟೆಯೂ ಸೇವೆ ಸಲ್ಲಿಸಲು ಅನುಮತಿ ನೀಡಲಾಗಿದೆ.
ಈ ಕುರಿತ ಪ್ರಸ್ತಾವಕ್ಕೆ ದೆಹಲಿಯ ಲೆಫ್ಟಿನೆಂಟ್ ಗೌರ್ನರ್ ವಿ.ಕೆ. ಸಕ್ಸೆನಾ ಅನುಮತಿ ನೀಡಿದ್ದು, ದೀಪಾವಳಿ ಹೊತ್ತಿಗೆ ಅಧಿಕೃತ ಆದೇಶ ಹೊರಬೀಳುವ ಸಾಧ್ಯತೆ ಇದೆ. ಇದರೊಂದಿಗೆ ರಾತ್ರಿ ಜೀವನದ ಹೊಸ ಶಕೆ ದೇಶದ ರಾಜಧಾನಿ ದೆಹಲಿಯಲ್ಲಿ ಆರಂಭವಾಗಲಿದೆ.
2016 ರಿಂದಲೂ ದಿನದ 24 ಗಂಟೆಯೂ ಸೇವೆ ನೀಡಲು ಅವಕಾಶ ಕಲ್ಪಿಸುವಂತೆ ವಿವಿಧ ವಲಯದ ಉದ್ಯಮಗಳಿಂದ ಒತ್ತಾಯ ಕೇಳಿ ಬರುತ್ತಿತ್ತು. ಸರ್ಕಾರ ಈ ಮನವಿಗಳನ್ನು ಪುರಸ್ಕರಿಸಿರಲಿಲ್ಲ. ಈಗ ಲೆಫ್ಟಿನೆಂಟ್ ಗವರ್ನರ್ ಕೆಲವು ಉದ್ಯೋಗ ಅವಕಾಶ ನೀಡಲು ಅನುಮತಿ ನೀಡಿದ್ದಾರೆ.
ಆನ್ಲೈನ್ ಡೆಲಿವರಿ, ವೈದ್ಯಕೀಯ, ಅಗತ್ಯ ವಸ್ತುಗಳು, ಸರಕು ಸಾಗಣೆ, ಹೋಟೆಲ್, ರೆಸ್ಟೋರೆಂಟ್, ಸಾರಿಗೆ ಮೊದಲಾದ 300 ರೀತಿಯ ಉದ್ಯಮಗಳು ದೆಹಲಿಯಲ್ಲಿ 24 ಗಂಟೆಯೂ ಸೇವೆ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಕಾರ್ಮಿಕರ ಭದ್ರತೆ ಮತ್ತು ಸುರಕ್ಷತೆಗೆ ಕೆಲವು ಷರತ್ತುಗಳನ್ನು ಕೂಡ ವಿಧಿಸಲಾಗಿದೆ. ಬಾರ್ ಗಳಿಗೆ ರಾತ್ರಿ ಒಂದು ಗಂಟೆವರೆಗೆ ಮಾತ್ರ ಮದ್ಯ ಮಾರಾಟಕ್ಕೆ ಅವಕಾಶವಿದೆ.
ಈ ಕುರಿತು 7 ದಿನಗಳಲ್ಲಿ ಅಧಿಸೂಚನೆ ಹೊರಡಿಸುವಂತೆ ಎಲ್-ಜಿ ನಿರ್ದೇಶನ ನೀಡಿದ್ದಾರೆ. ದೆಹಲಿ ಅಂಗಡಿಗಳು ಮತ್ತು ಸ್ಥಾಪನೆ ಕಾಯಿದೆ, 1954 ರ ಸೆಕ್ಷನ್ 14, 15 ಮತ್ತು 16 ರ ಅಡಿಯಲ್ಲಿ ವಿನಾಯಿತಿ ನೀಡುವ ನಿರ್ಧಾರವು ಉದ್ಯೋಗ ಸೃಷ್ಟಿಯನ್ನು ಉತ್ತೇಜಿಸುತ್ತದೆ. ಆರ್ಥಿಕ ಬೆಳವಣಿಗೆಗೆ ಪೂರ್ವಾಪೇಕ್ಷಿತವಾದ ಧನಾತ್ಮಕ ಮತ್ತು ಅನುಕೂಲಕರ ವ್ಯಾಪಾರ ವಾತಾವರಣವನ್ನು ಉತ್ತೇಜಿಸುತ್ತದೆ. ಈ ನಿರ್ಧಾರವು ನಗರದಲ್ಲಿ ಹೆಚ್ಚು ಅಪೇಕ್ಷಿತ ‘ರಾತ್ರಿ ಜೀವನ’ಕ್ಕೆ ಪೂರಕವಾಗಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.