ಸುಮಾರು ಹತ್ತು ಕೋಟಿಯಷ್ಟು ಕ್ರೆಡಿಟ್ ಹಾಗೂ ಡೆಬಿಟ್ ಕಾರ್ಡ್ ಬಳಕೆದಾರರ ಮಾಹಿತಿಗಳನ್ನು ಭಾರೀ ಮೊತ್ತವೊಂದಕ್ಕೆ ಮಾರಾಟ ಮಾಡಲಾಗಿದೆ ಎಂದು ಸ್ವತಂತ್ರ ಸೈಬರ್ ಭದ್ರತೆ ಸಂಶೋಧಕ ರಾಜಶೇಖರ್ ರಾಜಹರಿಯಾ ತಿಳಿಸಿದ್ದಾರೆ.
ಬೆಂಗಳೂರು ಮೂಲದ ಡಿಜಿಟಲ್ ಪೇಮೆಂಟ್ಸ್ ಸೇವಾದಾರ ಜಸ್‌ಪೇ ಈ ಭಾರೀ ಡೇಟಾ ಡಂಪಿಂಗ್ ಅನ್ನು ಡಾರ್ಕ್ ವೆಬ್‌ನಲ್ಲಿ ಮಾಡಿದೆ ಎಂದು ರಾಜಶೇಖರ್ ತಿಳಿಸುತ್ತಾರೆ.
ಈ ಬಗ್ಗೆ ಸ್ಪಷ್ಟನೆ ಕೊಟ್ಟಿರುವ ಜಸ್‌ಪೇ, “ಸೈಬರ್ ದಾಳಿ ವೇಳೆ ಯಾವುದೇ ಕಾರ್ಡ್ ಸಂಖ್ಯೆ ಅಥವಾ ಹಣಕಾಸು ಮಾಹಿತಿಗಳು ಸೋರಿಕೆಯಾಗಿಲ್ಲ. ವಾಸ್ತವಿಕ ಸಂಖ್ಯೆಗಳು ವರದಿಯಾಗಿರುವ 10 ಕೋಟಿಗಿಂತಲೂ ಸಾಕಷ್ಟು ಕಡಿಮೆ ಇವೆ. ಆಗಸ್ಟ್ 18ರಂದು ನಮ್ಮ ಸರ್ವರ್‌ಗಳಿಗೆ ಅನಧಿಕೃತ ಯತ್ನವೊಂದರ ಮೂಲಕ ಒಳನುಸುಳುವ ಪ್ರಯತ್ನಗಳು ಜರುಗಿದ್ದವು. ಆದರೆ ಈ ಯತ್ನವನ್ನು ವಿಫಲಗೊಳಿಸಲಾಗಿದೆ. ಯಾವುದೇ ಮಾಹಿತಿಯನ್ನೂ ಬಿಟ್ಟುಕೊಟ್ಟಿಲ್ಲ” ಎಂದು ಜಸ್‌ಪೇ ವಕ್ತಾರರು ತಿಳಿಸಿದ್ದಾರೆ.
ಇದಕ್ಕೆ ವ್ಯತಿರಿಕ್ತವಾಗಿ ತಿಳಿಸಿರುವ ರಾಜಶೇಖರ್, ಈ ಮಾಹಿತಿಯಲ್ಲಿ ಕಾಳಸಂತೆಯಲ್ಲಿ ಮಾರಾಟ ಮಾಡಲಾಗಿದ್ದು, ಬಿಟ್‌ಕಾಯಿನ್ ಮೂಲಕ ವ್ಯವಹಾರ ಮಾಡಲಾಗಿದೆ ಎಂದಿದ್ದು, ಹ್ಯಾಕರ್‌ಗಳು ಏನಾದರೂ ಹ್ಯಾಶ್ ಆಲ್ಗರಿದಮ್ ಅನ್ನು ಕಂಡುಕೊಂಡಲ್ಲಿ, ಕಾರ್ಡ್ ಬೆರಳಚ್ಚನ್ನು ಸೃಷ್ಟಿಸಿಕೊಂಡು, ಮಾಸಲಾದ ಕಾರ್ಡ್ ನಂಬರ್ ಅನ್ನು ಪತ್ತೆ ಮಾಡಲು ಸಫಲರಾಗಲಿದ್ದಾರೆ ಎನ್ನುತ್ತಾರೆ.