ಬೆಂಗಳೂರು: ಈಗಾಗಲೇ ವಿದ್ಯುತ್, ತರಕಾರಿ ಸೇರಿ ಹಲವು ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸಿದ್ದ ಜನತೆಗೆ ಗಾಯದ ಮೇಲೆ ಬರೆ ಎಳೆದಂತೆ ಬೇಳೆ ಕಾಳು, ಜೀರಿಗೆ ದರ ಭಾರಿ ಹೆಚ್ಚಳವಾಗಿದೆ.
ಕಳೆದ ವಾರವಷ್ಟೇ ಒಂದು ಕೆಜಿಗೆ 120 ರೂಪಾಯಿ ಇದ್ದ ತೊಗರಿಬೇಳೆ 160 ರೂ. ತಲುಪಿದೆ. ಉದ್ದಿನ ಬೇಳೆ, ಹೆಸರುಕಾಳು, ಹೆಸರುಬೇಳೆ, ಹಲಸಂದೆ, ಶೇಂಗಾ, ಹುರುಳಿ ಬೆಲೆ ಕೆಜಿಗೆ ಕನಿಷ್ಠ 25 ರೂ.ವರೆಗೆ ಏರಿಕೆಯಾಗಿದೆ. ಜೀರಿಗೆ ಬೆಲೆ ದುಪ್ಪಟ್ಟಾಗಿದೆ. 300 ರೂ. ಇದ್ದ ಜೀರಿಗೆ ದರ 600 ರೂ.ಗೆ ಏರಿಕೆಯಾಗಿದೆ.
ತೊಗರಿ ಬೇಳೆ ದರ 125 ರೂ.ನಿಂದ 160 ರೂ.ಗೆ ಹೆಚ್ಚಳವಾಗಿದ್ದು, ಉದ್ದಿನ ಬೇಳೆ 100 ರೂ.ನಿಂದ 135 ರೂ.ಗೆ ತಲುಪಿದೆ. ಹುರುಳಿ ದರ 66 ರೂ. ನಿಂದ 105 ರೂ.ಗೆ ತಲುಪಿದೆ.
ಕಳೆದ ವರ್ಷ ಅತಿವೃಷ್ಟಿ, ಅನಾವೃಷ್ಟಿಯಿಂದ ಕಲ್ಬುರ್ಗಿ ಭಾಗದಲ್ಲಿ ತೊಗರಿ ಬೆಳೆ ನಷ್ಟವಾಗಿದ್ದು, ಇದರ ಪರಿಣಾಮ ಪೂರೈಕೆಯಲ್ಲಿ ವ್ಯತ್ಯಯವಾಗಿದೆ. ಆದರೆ, ಕೃತಕ ಅಭಾವ ಸೃಷ್ಟಿಸಿ ಬೆಲೆ ಏರಿಕೆ ಮಾಡಲಾಗುತ್ತಿದೆ ಎಂಬ ಮಾತುಗಳು ಕೂಡ ಕೇಳಿ ಬಂದಿವೆ. ಮಾರುಕಟ್ಟೆಯ ಕಾಣದ ಕೈಗಳು ಕೃತಕ ಅಭಾವ ಸೃಷ್ಟಿಸುತ್ತಿರುವ ಸಾಧ್ಯತೆ ಇದೆ ಎಂಬುದು ವ್ಯಾಪಾರಿಗಳ ಅಭಿಪ್ರಾಯವಾಗಿದೆ.