ಬೆಂಗಳೂರು: ಸಹಕಾರ ಸಂಘಗಳ ಮೂಲಕ ರೈತರು ಪಡೆದುಕೊಂಡ ಶೂನ್ಯ ಬಡ್ಡಿಯ ಬೆಳೆ ಸಾಲ ಸಕಾಲಕ್ಕೆ ಪಾವತಿಸದಿದ್ದರೆ ಶೇಕಡ 10 ರಷ್ಟು ಬಡ್ಡಿ ವಿಧಿಸಲಾಗುತ್ತದೆ ಎಂದು ಹೇಳಲಾಗಿದೆ.
ಶೂನ್ಯ ಬಡ್ಡಿಯಲ್ಲಿ ಬೆಳೆಸಾಲ ಪಡೆದುಕೊಂಡವರು ಕೊರೋನಾ ಕರ್ಫ್ಯೂ ಕಾರಣಕ್ಕೆ ಸಾಲ ಮರುಪಾವತಿ ಮಾಡಿಲ್ಲ. ಸಾಲ ಮರುಪಾವತಿ ಅವಧಿ ವಿಸ್ತರಿಸದಿದ್ದರೆ ರೈತರು ಪಡೆದ ಸಾಲಕ್ಕೆ ಚಕ್ರಬಡ್ಡಿ ಪಾವತಿಸಬೇಕಾಗುತ್ತದೆ.
ಮಾರ್ಚ್ ನಿಂದ ಜೂನ್ ವರೆಗಿನ ಅವಧಿಯಲ್ಲಿ ರೈತರು ಪ್ರತಿವರ್ಷ ಬೆಳೆ ಸಾಲ ಪಡೆಯುವುದು, ಮರುಪಾವತಿ ಅಥವಾ ನವೀಕರಣ ಕಾರ್ಯ ನಡೆಯುತ್ತದೆ. ಕರ್ಫ್ಯೂ ಕಾರಣದಿಂದ ಸಾಲ ನವೀಕರಣಕ್ಕೆ ಅಗತ್ಯ ದಾಖಲೆ ಹೊಂದಿಸಿಕೊಳ್ಳುವುದು ಸಾಧ್ಯವಾಗಿಲ್ಲ. ಇದರಿಂದ ಶೂನ್ಯ ಬಡ್ಡಿದರದ ಸಾಲಕ್ಕೆ ಚಕ್ರಬಡ್ಡಿ ಪಾವತಿಸಬೇಕಾದ ಅನಿವಾರ್ಯತೆ ಎದುರಾಗಿದೆ ಎನ್ನಲಾಗಿದೆ.
ಬೆಳೆ ಸಾಲ ಪಡೆಯಲು ಕೂಡ ಸಮಸ್ಯೆಯಾಗಿದೆ. ಬೆಳೆಸಾಲ ನವೀಕರಣಕ್ಕಾಗಿ ರೈತರು ಪಹಣಿ, ಇ.ಸಿ., ಬೆಳೆ ದೃಢೀಕರಣ ಪತ್ರ ನೀಡಬೇಕಿದೆ. ಕರ್ಫ್ಯೂ ಜಾರಿಯಾಗಿರುವುದರಿಂದ ದಾಖಲೆ ಪಡೆಯುವುದು ಸಾಧ್ಯವಾಗಿಲ್ಲ. ಇನ್ನು ಕಚೇರಿಗಳಲ್ಲಿ ಶೇಕಡ 50ರಷ್ಟು ಸಿಬ್ಬಂದಿ ಇರುವುದರಿಂದ ದಾಖಲೆಗಳು ಸರಿಯಾದ ಸಮಯಕ್ಕೆ ಸಿಗುತ್ತಿಲ್ಲ.
ಸಹಕಾರ ಸಂಘಗಳ ಮೂಲಕ ಪಡೆದ ಬೆಳೆ ಸಾಲ ಮರುಪಾವತಿಸದಿದ್ದರೆ ಮೂರು ಲಕ್ಷ ರೂ.ವರೆಗಿನ ಸಾಲಕ್ಕೆ ಶೂನ್ಯ ಬಡ್ಡಿಯ ಸೌಲಭ್ಯ ಸಿಗುವುದಿಲ್ಲ. ಸಾಲ ಪಡೆದ ದಿನದಿಂದಲೇ ಶೇಕಡ 10 ರಷ್ಟು ಬಡ್ಡಿ ಹೊರೆಬೀಳಲಿದೆ. ವಾಣಿಜ್ಯ ಬ್ಯಾಂಕುಗಳು ರೈತರ ಸಾಲವನ್ನು ವರ್ಷದೊಳಗೆ ಮರುಪಾವತಿಸಿದರೆ ಶೇಕಡ 4 ರಷ್ಟು ಬಡ್ಡಿ ಪಡೆಯುತ್ತವೆ. ನಿಗದಿತ ದಿನದೊಳಗೆ ಸಾಲ ಕಟ್ಟದಿದ್ದರೆ ಸಾಲ ಪಡೆದ ದಿನದಿಂದಲೇ ಶೇಕಡ 12 ರಷ್ಟು ಬಡ್ಡಿ ವಿಧಿಸಲಾಗುತ್ತದೆ ಎಂದು ಹೇಳಲಾಗಿದೆ. ಈ ಕಾರಣದಿಂದ ಸಾಲ ಮರುಪಾವತಿ ಅವಧಿಯನ್ನು ವಿಸ್ತರಿಸಬೇಕೆಂದು ಒತ್ತಾಯ ಕೇಳಿಬಂದಿದೆ.