ನವದೆಹಲಿ: ಭಾರತದಿಂದ ವಿದೇಶಕ್ಕೆ ಪ್ರಯಾಣಿಸುವ ಜನರಿಗೆ ಸಿಹಿ ಸುದ್ದಿ. ಕೊರೊನಾ ಪರೀಕ್ಷಾ ವರದಿಗಾಗಿ ಪ್ರಯಾಣಿಕರು ಇನ್ನು ಮುಂದೆ ಕಷ್ಟಪಡಬೇಕಾಗಿಲ್ಲ.
ಶೀಘ್ರದಲ್ಲೇ ಕೊರೊನಾ ಪರೀಕ್ಷಾ ವರದಿ ಕೋವಿನ್ ಆ್ಯಪ್‌ನಲ್ಲಿ ಜನರಿಗೆ ಲಭ್ಯವಾಗಲಿದೆ ಎಂದು ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರದ ಮುಖ್ಯಸ್ಥ ಆರ್.ಎಸ್. ಶರ್ಮಾ ಹೇಳಿದ್ದಾರೆ.
ಪ್ರಸ್ತುತ ಎಲ್ಲಾ ಲಸಿಕೆ ದತ್ತಾಂಶಗಳು ಕೋವಿನ್ ಆಪ್‌ನಲ್ಲಿ ಲಭ್ಯವಿದೆ. ಆದರೆ ಈ ಆಪ್‌ನಲ್ಲಿ ಕೆಲವು ಬದಲಾವಣೆಗಳನ್ನು ಮಾಡಲಿದ್ದೇವೆ. ಇದರಿಂದ ಜನರು ತಮ್ಮ ಕೊರೊನಾ ಪರೀಕ್ಷಾ ವರದಿಯನ್ನು ಆಪ್ ಮೂಲಕ ಡೌನ್‌ಲೋಡ್ ಮಾಡಬಹುದು ಎಂದು ಶರ್ಮಾ ತಿಳಿಸಿದ್ದಾರೆ.
ಪಾನ್, ಇಪಿಎಫ್ಒ ಆಧಾರ್ ಜೋಡಣೆ ಮಾಡುವವರಿಗೆ ಗುಡ್ ನ್ಯೂಸ್; ಆಧಾರ್ ಲಿಂಕ್ ಗೆ ಯಾವುದೇ ತೊಂದರೆ ಇಲ್ಲ; ಯುಐಡಿಎಐ ಸ್ಪಷ್ಟನೆ
“ನಾವು ಐಸಿಎಂಆರ್ ನ ಮಹಾನಿರ್ದೇಶಕರೊಂದಿಗೆ ಕೆಲಸ ಮಾಡುತ್ತಿದ್ದೇವೆ. ಈಗಾಗಲೇ ಒಂದು ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿದ್ದೇವೆ. ಕೋವಿನ್ ಪ್ರಮಾಣಪತ್ರವನ್ನು ಡೌನ್ ಲೋಡ್ ಮಾಡುವ ರೀತಿಯಲ್ಲೇ, ಈಗ ನೀವು ಡಿಜಿಟಲ್ ಸಹಿ ಮಾಡಿದ ಆರ್ಟಿಪಿಸಿಆರ್ ಪ್ರಮಾಣಪತ್ರವನ್ನು ಡೌನ್ ಲೋಡ್ ಮಾಡಿಕೊಳ್ಳುವಿರಿ” ಎಂದು ಶರ್ಮಾ ಹೇಳಿದ್ದಾರೆ.
ಹೆಚ್ಚಿನ ದೇಶಗಳಿಗೆ ಪ್ರಯಾಣಿಸುವ 72 ಗಂಟೆಗಳ ಮೊದಲು ಅಥವಾ 96 ಗಂಟೆಗಳೊಳಗೆ ಆರ್ ಟಿ ಪಿಸಿಆರ್ ಪರೀಕ್ಷೆ ಕಡ್ಡಾಯವಾಗಿರುತ್ತದೆ. ಆದರೆ ಅನೇಕ ರಾಷ್ಟ್ರಗಳು ಇನ್ನೂ ಕೋವಿನ್ ಅನ್ನು ಲಸಿಕೆ ಪಾಸ್ ಪೋರ್ಟ್ ಆಗಿ ಸ್ವೀಕರಿಸಿಲ್ಲ. ಎಲ್ಲಾ ದೇಶದ ಡಿಜಿಟಲ್ ಲಸಿಕೆ ಪ್ರಮಾಣಪತ್ರವನ್ನು ಡಿಜಿಟಲ್ ಪಾಸ್ ಪೋರ್ಟ್ ಆಗಿ ಸ್ವೀಕರಿಸಲಾಗುವುದು ಎಂಬ ಬಗ್ಗೆ ಬಹುಪಕ್ಷೀಯ ಒಪ್ಪಂದಕ್ಕೆ ಪ್ರಯತ್ನಗಳು ನಡೆದಿವೆ. ಆದರೆ, ಅದು ಕಾರ್ಯ ರೂಪಕ್ಕೆ ಬಂದಿಲ್ಲ ಎಂದು ಶರ್ಮಾ ಹೇಳಿದರು.