ಹಿಂದೂ ಧರ್ಮದವರಿಗೆ ಸಾಲು ಸಾಲು ಹಬ್ಬಗಳು ಎದುರಾಗ್ತಾ ಇವೆ. ಇನ್ನೇನು ಕೆಲವೇ ದಿನಗಳಲ್ಲಿ ನವರಾತ್ರಿ, ದಶಮಿಯೂ ಶುರುವಾಗಲಿದೆ. ರಾಜಧಾನಿ ದೆಹಲಿಯಲ್ಲಂತೂ ನವದುರ್ಗೆಯ ಮೂರ್ತಿಯನ್ನಿಟ್ಟು ಪ್ರತಿವರ್ಷ ದಸರಾ ಹಬ್ಬವನ್ನ ಆಚರಿಸಲಾಗ್ತಾ ಇತ್ತು. ಆದ್ರೆ ಈ ಬಾರಿ ಮಾತ್ರ ಹಬ್ಬದ ಸಡಗರ ಮಂಕಾಗಿದೆ.
ದೆಹಲಿ ಸರ್ಕಾರ ಹಬ್ಬದ ಆಚರಣೆಗೆ ಮಾರ್ಗಸೂಚಿಯನ್ನ ಹೊರಡಿಸಿಬಿಟ್ಟಿದೆ. ಹೀಗಾಗಿ ಈ ಬಾರಿ ಯಾರೂ ಕೂಡ ಅದ್ಧೂರಿಯಾಗಿ ಹಬ್ಬ ಆಚರಿಸೋ ಯೋಚನೆಯಲ್ಲೇ ಇಲ್ಲ. ಇದರ ನೇರ ಪರಿಣಾಮ ವಿಗ್ರಹ ತಯಾರಿಕರಿಗೆ ತಟ್ಟಿದೆ. ಗ್ರಾಹಕರೇ ಸಿಗದ ಕಾರಣ ಮೂರ್ತಿ ತಯಾರಕರು ಕಂಗಾಲಾಗಿ ಹೋಗಿದ್ದಾರೆ.
ಇನ್ನು ಈ ಬಗ್ಗೆ ಶಿಲ್ಪಿ ಗೋವಿಂದ್ ನಾಥ್ ಎಂಬವರನ್ನ ಕೇಳಿದ್ರೆ ಈ ಬಾರಿ ಯಾರೂ ಕೂಡ 5 ಅಡಿಗಿಂತ ಎತ್ತರದ ವಿಗ್ರಹವನ್ನ ಆರ್ಡರ್ ಮಾಡಿಯೇ ಇಲ್ಲ. ನನ್ನ ಇಷ್ಟು ವರ್ಷದ ಅನುಭವದಲ್ಲಿ ಈ ವರ್ಷ ಕೊಟ್ಟಂತಹ ಹೊಡೆತವನ್ನ ಯಾವ ವರ್ಷವೂ ನಾನು ಅನುಭವಿಸಿಯೇ ಇರಲಿಲ್ಲ. ಪ್ರತಿ ವರ್ಷ 40ರಿಂದ 50 ವಿಗ್ರಹಗಳನ್ನ ತಯಾರಿಸುತ್ತಿದ್ದ ನಾವು ಈ ಬಾರಿ ಕೇವಲ 9 ವಿಗ್ರಹಗಳ ಆರ್ಡರ್ ಪಡೆದಿದ್ದೇವೆ. 2020 ನಮ್ಮ ಪಾಲಿಗೆ ಕಹಿಯ ವರ್ಷ ಎಂದು ನೋವನ್ನ ಹೊರಹಾಕಿದ್ರು.
ಇತ್ತ ಪಶ್ಚಿಮ ಬಂಗಾಳ ಸರ್ಕಾರ ಕೂಡ ಕೊರೊನಾ ನಿರ್ಬಂಧ ವಿಧಿಸಿದೆ. ಆದರೆ ಪೂಜಾ ಕಾರ್ಯಕ್ಕೆ ಯಾವುದೇ ಅಡ್ಡಿ ಹೇರಿಲ್ಲ. ಪಶ್ಚಿಮ ಬಂಗಾಳದಲ್ಲಿ ಚುನಾವಣೆ ಸಮೀಪಿಸಿರೋದ್ರಿಂದ ಅವರು ಎಲ್ಲರನ್ನ ಸಂತೋಷಪಡಿಸೋಕೆ ಪ್ರಯತ್ನ ಪಡ್ತಿದ್ದಾರೆ. ಆದರೆ ದೆಹಲಿಯಲ್ಲಿ ಬಂಗಾಳಿಗಳ ಸಂಖ್ಯೆ ತುಂಬಾನೆ ಕಡಿಮೆ ಹಾಗೂ ನಮ್ಮಲ್ಲಿ ಸದ್ಯ ಯಾವುದೇ ಚುನಾವಣೆಯೂ ಇಲ್ಲದ ಕಾರಣ ದೆಹಲಿ ಸರ್ಕಾರಕ್ಕೆ ನಮ್ಮ ನೋವು ಕಾಣ್ತಿಲ್ಲ ಅಂತಾ ಆಕ್ರೋಶ ಹೊರಹಾಕಿದ್ದಾರೆ.