ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮ್ ಫೆಬ್ರವರಿ 1 ರಂದು ಕೇಂದ್ರ ಬಜೆಟ್ ಮಂಡಿಸಲಿದ್ದಾರೆ. ಈ ಬಾರಿ ಕೊರೋನಾ ಕಾರಣದಿಂದ ಸರ್ಕಾರ ಬಜೆಟ್ ಪುಸ್ತಕ ಮುದ್ರಿಸದಿರಲು ನಿರ್ಧಾರ ಕೈಗೊಂಡಿದೆ.
ಕೊರೋನ ಪ್ರೋಟೋಕಾಲ್ ಅನುಸರಿಸಿ ಈ ವರ್ಷ ಬೃಹತ್ ಬಜೆಟ್ ದಾಖಲೆಗಳನ್ನು ಮುದ್ರಿಸಲಾಗುವುದಿಲ್ಲ. ಸಂಸತ್ ಸದಸ್ಯರಿಗೆ ಎಲೆಕ್ಟ್ರಾನಿಕ್(ವಿದ್ಯುನ್ಮಾನ) ಬಳಕೆಗೆ ಸಾಫ್ಟ್ ಕಾಪಿ, ಪಿಡಿಎಫ್ ಫೈಲ್ ನೀಡಲಾಗುವುದು ಎಂದು ಹೇಳಲಾಗಿದೆ.
1947 ರ ನವೆಂಬರ್ 26 ರಂದು ಸ್ವತಂತ್ರ ಭಾರತದ ಮೊದಲ ಬಜೆಟ್ ಮಂಡನೆಯಾದ ನಂತರದಲ್ಲಿ ಇದೇ ಮೊದಲ ಬಾರಿಗೆ ಕೇಂದ್ರ ಸರ್ಕಾರದ ಆದಾಯ ಮತ್ತು ಖರ್ಚು ವೆಚ್ಚದ ಮಾಹಿತಿ ದಾಖಲೆಗಳನ್ನು ಮುದ್ರಿಸಲಾಗುತ್ತಿಲ್ಲ.
ಕೊರೋನಾ ಕಾರಣದಿಂದಾಗಿ ಈ ಹಣಕಾಸು ವರ್ಷದಲ್ಲಿ ಕೇಂದ್ರ ಬಜೆಟ್ ದಾಖಲೆಗಳನ್ನು ಮುದ್ರಿಸದೇ ವಿದ್ಯುನ್ಮಾನವಾಗಿ ನೀಡಲಿದ್ದು, ಎಲ್ಲಾ ಸಂಸದರಿಗೆ ಬಜೆಟ್ ಸಾಫ್ಟ್ ಕಾಪಿಗಳನ್ನು ನೀಡಲಾಗುವುದು. ಸಾಮಾನ್ಯವಾಗಿ ಬಜೆಟ್ ಮುದ್ರಣಕ್ಕೆ ಎರಡು ವಾರಗಳ ಮೊದಲು ಹಣಕಾಸು ಸಚಿವಾಲಯದ ನೆಲಮಾಳಿಗೆಯ ಮುದ್ರಣಾಲಯದಲ್ಲಿ ಸಿಬ್ಬಂದಿ ಬಂಧಿಸಿಟ್ಟು ಬಜೆಟ್ ಕಾಪಿ ಮುದ್ರಿಸಲಾಗುತ್ತದೆ. ಹಲ್ವಾ ಸಮಾರಂಭದೊಂದಿಗೆ ಮುದ್ರಣ ಕಾರ್ಯ ಆರಂಭವಾಗುತ್ತದೆ. ಆದರೆ, ಈ ಸಲ ಬಜೆಟ್ ಕಾಪಿಯನ್ನು ಮುದ್ರಿಸುತ್ತಿಲ್ಲ ಎಂದು ಹೇಳಲಾಗಿದೆ.