
ನವದೆಹಲಿ: ದೇಶದಲ್ಲಿ ಕೋವಿಡ್ ಬಿಕ್ಕಟ್ಟು ತೀವ್ರಗೊಂಡ ಹಿನ್ನೆಲೆಯಲ್ಲಿ ದೇಶಾದ್ಯಂತ ಲಾಕ್ಡೌನ್ ಜಾರಿಗೆ ಒತ್ತಾಯ ಹೆಚ್ಚಾಗಿದೆ. ವಿರೋಧಪಕ್ಷಗಳು ಸುಪ್ರೀಂಕೋರ್ಟ್, ಕೋವಿಡ್ ಟಾಸ್ಕ್ ಪೋರ್ಸ್ ಸೇರಿದಂತೆ ಅನೇಕರು ಲಾಕ್ಡೌನ್ ಜಾರಿಗೆ ಸಲಹೆ ನೀಡಿದ್ದಾರೆ.
ಸೋಂಕಿನ ಸರಪಳಿ ತುಂಡರಿಸಲು ಲಾಕ್ಡೌನ್ ಅಗತ್ಯವೆಂದು SII ಅಧ್ಯಕ್ಷ ಉದಯ ಕೋಟಕ್ ಹೇಳಿದ್ದಾರೆ. ಕಾರ್ಪೊರೇಟ್ ವಲಯದಿಂದಲೂ ಲಾಕ್ಡೌನ್ ಜಾರಿಗೆ ಬೆಂಬಲ ವ್ಯಕ್ತವಾಗಿದೆ. ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್, ಇನ್ಫೋಸಿಸ್, ಮಾರುತಿ ಸುಜುಕಿ, ಹೀರೋ ಮೋಟೋಕಾರ್ಪ್, ಮಹೀಂದ್ರ ಅಂಡ್ ಮಹೀಂದ್ರ, ಕೋಟಕ್ ಮಹೀಂದ್ರಾ ಬ್ಯಾಂಕ್ ಸೇರಿದಂತೆ ಅನೇಕ CII ಸದಸ್ಯರು ನೌಕರರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ತಮ್ಮದೇ ಆದ ಕ್ರಮ ಕೈಗೊಂಡಿದ್ದಾರೆ.
ಸೇವಾವಲಯದ ಸಂಸ್ಥೆಗಳು ವರ್ಕ್ ಫ್ರಮ್ ಹೋಮ್ ಗೆ ಆದ್ಯತೆ ನೀಡಿದ್ದು, ಉತ್ಪಾದನಾ ವಲಯದ ಸಂಸ್ಥೆಗಳು ಉತ್ಪಾದನೆಯನ್ನು ಸ್ಥಗಿತಗೊಳಿಸಿ ನಿರ್ವಹಣೆ ವೇಳಾಪಟ್ಟಿಯನ್ನು ಬದಲಿಸಲಾಗಿದೆ.
ಉತ್ಪಾದಿಸುವುದಕ್ಕಿಂತ ಜೀವ ಉಳಿಸುವುದು ಮುಖ್ಯ. ಕಂಪನಿಯೊಂದಿಗೆ ಲಭ್ಯವಿರುವ ಯಾವುದೇ ಸಂಪನ್ಮೂಲ ದೇಶಕ್ಕೆ ಅಗತ್ಯವಿರುವವರೆಗೂ ಉತ್ಪಾದನೆ ತೊಂದರೆಗೆ ಒಳಗಾಗಬಹುದು ಎಂದು ಆಸ್ಪತ್ರೆಗಳಿಗೆ ದ್ರವ ಆಮ್ಲಜನಕವನ್ನು ಪೂರೈಕೆ ಮಾಡುತ್ತಿರುವ ಜೆಎಸ್ಡಬ್ಲ್ಯೂ ಗ್ರೂಪ್ ನ ವ್ಯವಸ್ಥಾಪಕ ನಿರ್ದೇಶಕ ಸಜ್ಜನ್ ಜಿಂದಾಲ್ ಹೇಳಿದ್ದಾರೆ.
ಮತ್ತೊಬ್ಬ ಕಾರ್ಪೋರೇಟ್ ವಲಯದ ನಾಯಕ, ಭಾರತದ ಆರೋಗ್ಯ ವ್ಯವಸ್ಥೆ ಹದಗೆಟ್ಟಿರುವುದರಿಂದ ಅನಿವಾರ್ಯವಲ್ಲದ ವ್ಯವಹಾರ ಚಟುವಟಿಕೆಗಳನ್ನು ಸ್ಥಗಿತಗೊಳಿಸಬೇಕೆಂದು ಸಲಹೆ ನೀಡಿದ್ದಾರೆ. ಎರಡು ವಾರ ಸಂಪೂರ್ಣ ಲಾಕ್ಡೌನ್ ಮಾಡುವುದು ಒಂದೇ ಮಾರ್ಗ ಎಂದು ಅವರು ಹೇಳಿದ್ದಾರೆ. ರಿಯಲ್ ಎಸ್ಟೇಟ್ ಉದ್ಯಮಿ ನಿರಂಜನ್ ಹೀರಾನಂದಾನಿ ಕೂಡ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಸಂಪೂರ್ಣ ಲಾಕ್ಡೌನ್ ಮಾಡುವುದರಿಂದ ಆರ್ಥಿಕತೆಯ ಮೇಲೆ ಗಂಭೀರ ಪರಿಣಾಮ ಉಂಟಾಗುತ್ತದೆ. ನಿರುದ್ಯೋಗ ಹೆಚ್ಚಾಗುತ್ತದೆ. ಜೊತೆ ಸಂಕಷ್ಟ, ಸಾವು ಹೆಚ್ಚಾಗುತ್ತದೆ ಎಂಬ ಅಭಿಪ್ರಾಯವೂ ಕೇಳಿಬಂದಿದೆ. ಸಂಪೂರ್ಣ ಲಾಕ್ಡೌನ್ ಮತ್ತು ವ್ಯಾಪಾರ ವಹಿವಾಟುಗಳಿಗೆ ಅವಕಾಶ ನೀಡುವ ಸಂದರ್ಭದಲ್ಲಿ ಸಮತೋಲನ ಕಾಯ್ದುಕೊಳ್ಳಬೇಕು. ಕೇಂದ್ರವು ಕಠಿಣ ಕ್ರಮ ಕೈಗೊಂಡು ಜನರನ್ನು ಮನೆಯಲ್ಲಿ ಇರಲು ಒತ್ತಾಯಿಸಬೇಕು ಎಂದೂ ಹೇಳಲಾಗಿದೆ.
ಅಮೆರಿಕದ ಉನ್ನತ ಸಾರ್ವಜನಿಕ ಆರೋಗ್ಯ ತಜ್ಞ ಮತ್ತು ಶ್ವೇತಭವನದ ಮುಖ್ಯ ವೈದ್ಯಕೀಯ ಸಲಹೆಗಾರ ಡಾ. ಡಾ. ಆಂಥೋನಿ ಫೌಸಿ ಅವರು, ಭಾರತದಲ್ಲಿ ಕೆಲವು ವಾರ ರಾಷ್ಟ್ರವ್ಯಾಪಿ ಲಾಕ್ ಡೌನ್ ಜಾರಿಗೊಳಿಸಬೇಕೆಂದು ಇತ್ತೀಚೆಗೆ ಹೇಳಿದ್ದಾರೆ.