
ಕೊರೊನಾ ವೈರಸ್ ಮಹಾಮಾರಿಯಿಂದಾಗಿ ನಗದು ವ್ಯವಹಾರದಲ್ಲಿ ಜನರ ವರ್ತನೆ ಬದಲಾಗಿದೆ. ಜನರು ಬ್ಯಾಂಕ್ ಗಳಿಗೆ ಹೋಗಿ ನಗದು ಪಡೆಯುವ ಬದಲು ಎಟಿಎಂನಲ್ಲಿಯೇ ಹೆಚ್ಚಿನ ಹಣ ವಿತ್ ಡ್ರಾ ಮಾಡ್ತಿದ್ದಾರೆ. ಅಲ್ಲದೆ ಸಣ್ಣ ಸಣ್ಣ ವಹಿವಾಟನ್ನು ಅವರು ಡಿಜಿಟಲ್ ರೂಪದಲ್ಲಿ ಮಾಡ್ತಿದ್ದಾರೆ.
ಯೂನಿವರ್ಸಲ್ ಟೆಕ್ನಾಲಜೀಸ್ ಸಂಸ್ಥಾಪಕ ಮತ್ತು ವ್ಯವಸ್ಥಾಪಕ ನಿರ್ದೇಶಕ ಮುಂದರ್ ಅಗಾಶೆ ಪ್ರಕಾರ, ಲಾಕ್ ಡೌನ್ ಮತ್ತು ಸಾಮಾಜಿಕ ಅಂತರದ ನಿಯಮಗಳನ್ನು ಗಮನದಲ್ಲಿಟ್ಟುಕೊಂಡು ಜನರು ಬ್ಯಾಂಕಿಗೆ ಹೋಗುವುದನ್ನು ತಪ್ಪಿಸುತ್ತಿದ್ದಾರೆ. ಹಣವನ್ನು ಹಿಂಪಡೆಯಲು ಎಟಿಎಂಗಳನ್ನು ಬಳಸುತ್ತಿದ್ದಾರೆ. ಎಟಿಎಂ ಮೂಲಕ ಹಣ ವಿತ್ ಡ್ರಾ ಶೇಕಡಾ 20 ರಷ್ಟು ಹೆಚ್ಚಾಗಿದೆ ಎಂದು ಅವರು ಹೇಳಿದ್ದಾರೆ.
ಜನರಿಗೆ ಈಗ ಹೆಚ್ಚೆಚ್ಚು ಹಣದ ಅವಶ್ಯಕತೆಯಿದೆ. ಔಷಧಿ ಹಾಗೂ ತುರ್ತು ಪರಿಸ್ಥಿತಿಗಾಗಿ ಹಣವನ್ನು ಉಳಿಸುವ ಪ್ರಯತ್ನ ನಡೆಸಿದ್ದಾರೆ. ಕೊರೊನಾ ಹೆಚ್ಚಾಗುವುದಕ್ಕಿಂತ ಮೊದಲು ಜನರು ಸರಾಸರಿ 2,000 ದಿಂದ 3,000 ರೂಪಾಯಿಗಳನ್ನು ವಿತ್ ಡ್ರಾ ಮಾಡ್ತಿದ್ದರು. ಈಗ ಅದು ಸುಮಾರು 20 ಪ್ರತಿಶತದಷ್ಟು ಹೆಚ್ಚಾಗಿದ್ದು 3,000 ರೂಪಾಯಿಯಿಂದ 4,000 ರೂಪಾಯಿಯಾಗಿದೆ. ಇದು ನಗರದಲ್ಲಿ ಮಾತ್ರವಲ್ಲ ಹಳ್ಳಿಗಳಲ್ಲೂ ಹೆಚ್ಚಾಗಿದೆ ಎಂದು ಅಗಾಶೆ ಹೇಳಿದ್ದಾರೆ.
ಸಣ್ಣ ವಹಿವಾಟಿಗೆ ಯುಪಿಐ ಆದ್ಯತೆಯ ಮಾಧ್ಯಮವಾಗಿದೆ. ಇದ್ರಲ್ಲಿ ಸರಾಸರಿ 1000 ರೂಪಾಯಿಯಾಗಿದ್ದರೆ ಐಎಂಪಿಎಸ್ ಮೂಲಕ 9,000 ರೂಪಾಯಿಗಳವರೆಗೆ ಪಾವತಿಸಲಾಗ್ತಿದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಇತ್ತೀಚಿನ ಮಾಹಿತಿಯ ಪ್ರಕಾರ, ಮೇ 7 ರಂದು ಚಲಾವಣೆಯಲ್ಲಿರುವ ಕರೆನ್ಸಿ ಮೊತ್ತ 2,939,997 ಕೋಟಿ ರೂಪಾಯಿ. ಮಾರ್ಚ್ 26 ರಂದು ಚಲಾವಣೆಯಲ್ಲಿದ್ದ ಮೊತ್ತ 2,858,640 ಕೋಟಿ ರೂಪಾಯಿಯಾಗಿತ್ತು. ಈ ಅನಿಶ್ಚಿತ ಕ್ಷಣದಲ್ಲಿ ಜನರು ಹಣವನ್ನು ಉಳಿಸಿಕೊಳ್ಳಲು ಆದ್ಯತೆ ನೀಡುತ್ತಿದ್ದಾರೆ.