ಕೊರೊನಾ ವಿಶ್ವವನ್ನೇ ವ್ಯಾಪಿಸಿದ್ದು, ಈಗಾಗಲೇ ಲಕ್ಷಾಂತರ ಮಂದಿ ಸಾವನ್ನಪ್ಪಿದ್ದಾರೆ. ಭಾರತದಲ್ಲೂ ಇದು ತನ್ನ ಆರ್ಭಟ ನಡೆಸುತ್ತಿದ್ದು, ಹೀಗಾಗಿ ಇದರ ನಿಯಂತ್ರಣಕ್ಕಾಗಿ ದೇಶದಾದ್ಯಂತ ಲಾಕ್ ಡೌನ್ ಜಾರಿಗೊಳಿಸಲಾಗಿತ್ತು. ಲಾಕ್ ಡೌನ್ ಜಾರಿಯಲ್ಲಿದ್ದ ವೇಳೆ ಅಗತ್ಯ ಸೇವೆಗಳನ್ನು ಹೊರತುಪಡಿಸಿ ಉಳಿದೆಲ್ಲಾ ಸೇವೆಗಳು ಬಂದ್ ಆಗಿದ್ದವು. ಇದರ ಪರಿಣಾಮ ಮೊದಲೇ ಕುಸಿತ ಕಂಡಿದ್ದ ದೇಶದ ಆರ್ಥಿಕ ಪರಿಸ್ಥಿತಿ ಮತ್ತಷ್ಟು ಪಾತಾಳಕ್ಕಿಳಿಯಿತು.
ಲಾಕ್ ಡೌನ್ ಸಡಿಲಿಕೆಯಾಗಿ ವ್ಯಾಪಾರ ವಹಿವಾಟುಗಳು ಎಂದಿನಂತೆ ಆರಂಭವಾಗಿವೆ. ಆದರೆ ಕೊರೊನಾ ಭಯದಿಂದ ಈ ಮೊದಲಿನಂತೆ ಸಾರ್ವಜನಿಕರು ಖರೀದಿಗೆ ಮುಂದಾಗುತ್ತಿಲ್ಲ. ಇದರ ಪರಿಣಾಮ ಕೆಲವೊಬ್ಬರು ನಷ್ಟ ಭರಿಸಲಾರದೆ ತಮ್ಮ ಉದ್ಯಮಗಳನ್ನು ಬಂದ್ ಮಾಡುತ್ತಿದ್ದಾರೆ. ಕೊರೊನಾಗೆ ಲಸಿಕೆ ಇನ್ನೂ ಲಭ್ಯವಾಗದ ಪರಿಣಾಮ ಆರ್ಥಿಕ ಹಿಂಜರಿತ ಅಲ್ಲಿಯವರೆಗೆ ಮುಂದುವರಿಯಲಿದೆ ಎಂದು ಹೇಳಲಾಗುತ್ತಿದೆ.
ಆದರೆ ಅಚ್ಚರಿಯ ಸಂಗತಿಯೆಂದರೆ ಕೊರೊನಾ ಕೆಲವೊಂದು ಉದ್ಯಮಕ್ಕೆ ವರದಾನವಾಗಿ ಪರಿಣಮಿಸಿದೆ. ಹೀಗಾಗಿ ಈ ಕ್ಷೇತ್ರಗಳ ವ್ಯಾಪಾರ ವಹಿವಾಟು ಈ ಮೊದಲಿಗಿಂತಲೂ ಹೆಚ್ಚಳವಾಗಿರುವುದು ಸತ್ಯ. ಅದರಲ್ಲೂ ಡಿಜಿಟಲ್ ವಹಿವಾಟು, ಇಂಟರ್ನೆಟ್ ಕ್ಷೇತ್ರ, ಆನ್ ಲೈನ್ ಫುಡ್ ಡೆಲಿವರಿ, ಸ್ಯಾನಿಟೈಸರ್ ತಯಾರಿಕಾ ಸಂಸ್ಥೆಗಳು, ಆರೋಗ್ಯ ಉಪಕರಣಗಳ ತಯಾರಕರ ವಹಿವಾಟು ದಿನೇ ದಿನೇ ಹೆಚ್ಚಳವಾಗತೊಡಗಿದ್ದು, ಮುಂದಿನ ದಿನಗಳಲ್ಲಿ ಇದು ಇನ್ನಷ್ಟು ವೇಗ ಪಡೆಯುವ ನಿರೀಕ್ಷೆಯಿದೆ.
ಕೊರೊನಾ ಕಾರಣಕ್ಕೆ ಬಹುತೇಕ ಕಂಪನಿಗಳು ಮನೆಯಿಂದಲೇ ಕಾರ್ಯ ನಿರ್ವಹಿಸಲು ತಮ್ಮ ಉದ್ಯೋಗಿಗಳಿಗೆ ಅನುವು ಮಾಡಿಕೊಟ್ಟಿದ್ದು, ಜೊತೆಗೆ ಶಾಲಾ – ಕಾಲೇಜುಗಳು ಬಂದ್ ಆಗಿರುವ ಕಾರಣ ಆನ್ ಲೈನ್ ಮೂಲಕವೇ ಪಾಠ ಪ್ರವಚನ ನಡೆಯುತ್ತಿರುವುದರಿಂದ ಇಂಟರ್ನೆಟ್ ಕ್ಷೇತ್ರದ ಬಳಿಕ ಹಿಂದೆಂದಿಗಿಂತಲೂ ಹೆಚ್ಚಾಗಿದೆ. ಜೊತೆಗೆ ಮೀಟಿಂಗ್ ಇತ್ಯಾದಿಗಳಿಗೆ ವಿಡಿಯೋ ಆಪ್ ಗಳ ಬಳಕೆಯಾಗುತ್ತಿದ್ದು, ಇದರಿಂದಾಗಿ ಹೊಸ ಹೊಸ ಅವಿಷ್ಕಾರಗಳೊಂದಿಗೆ ಇವು ಬಳಕೆಗೆ ಲಭ್ಯವಾಗುತ್ತಿದೆ.
ಅದೇ ರೀತಿ ಆನ್ ಲೈನ್ ಫುಡ್ ಡೆಲಿವರಿಗೆ ಡಿಮ್ಯಾಂಡ್ ಹೆಚ್ಚಿದ್ದು, ಜೊತೆಗೆ ರೋಗ ನಿರೋಧಕ ಶಕ್ತಿ ಹೊಂದಿರುವ ಉತ್ಪನ್ನಗಳ ಖರೀದಿಗೆ ಸಾರ್ವಜನಿಕರು ಹೆಚ್ಚು ಆಸಕ್ತಿ ತೋರುತ್ತಿದ್ದಾರೆ. ಪ್ರಸ್ತುತ ಲಾಕ್ ಡೌನ್ ತೆರವುಗೊಂಡು ಹೋಟೆಲ್ ಉದ್ಯಮ ಆರಂಭವಾಗಿದ್ದರೂ ಸಹ ಕೊರೊನಾ ಭಯದಿಂದ ಹೋಟೆಲ್, ರೆಸ್ಟೋರೆಂಟ್ ಗಳಿಗೆ ಹೋಗಲು ಜನ ಹಿಂಜರಿಯುತ್ತಿದ್ದಾರೆ. ಹೀಗಾಗಿ ಆನ್ ಲೈನ್ ನಲ್ಲೇ ಫುಡ್ ಆರ್ಡರ್ ಮಾಡುತ್ತಿದ್ದಾರೆ. ಜೊತೆಗೆ ಅಗತ್ಯ ಸಾಮಾಗ್ರಿಗಳನ್ನು ಆನ್ ಲೈನ್ ಮೂಲಕವೇ ತರಿಸಿಕೊಳ್ಳಲು ಒಲವು ತೋರುತ್ತಿದ್ದಾರೆ. ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಚ್ಯವನ್ ಪ್ರಾಶ್ ಮೊದಲಾದ ಉತ್ಪನ್ನಗಳಿಗೆ ಈಗ ಬೇಡಿಕೆ ಹೆಚ್ಚಿದೆ.
ಕೊರೊನಾ ಬಾರದಂತೆ ತಡೆಯಲು ಅತ್ಯಗತ್ಯವಾಗಿ ಬೇಕಾದ ಮಾಸ್ಕ್, ಸ್ಯಾನಿಟೈಸರ್ ಮೊದಲಾದವುಗಳಿಗೆ ಬೇಡಿಕೆ ಹೆಚ್ಚಾಗಿದ್ದು, ಇದರ ಜೊತೆಗೆ ಮನೆ ಸ್ವಚ್ಚ ಮಾಡುವ ಕೆಮಿಕಲ್ ಗಳನ್ನೂ ಜನತೆ ಹೆಚ್ಚಾಗಿ ಖರೀದಿಸುತ್ತಿದ್ದಾರೆ. ಇದನ್ನೇ ಬಂಡವಾಳಗಿಸಿಕೊಂಡಿರುವ CavinKare ಸೇರಿದಂತೆ ಹಲವು ಕಂಪನಿಗಳು ಸ್ಪ್ರೇ ಮೊದಲಾದ ಹೊಸ ಉತ್ಪನ್ನಗಳನ್ನು ಬಿಡುಗಡೆ ಮಾಡುತ್ತಿವೆ. ITC ಕೂಡಾ ಸ್ಯಾನಿಟೈಸ್ ಲಿಕ್ವಿಡ್ ಉತ್ಪನ್ನ ಬಿಡುಗಡೆ ಮಾಡಿದೆ. ಜೊತೆಗೆ Marico Ltd ತರಕಾರಿ ತೊಳೆಯಲು ವೆಜ್ಜಿ ಕ್ಲೀನ್ ಎಂಬ ಉತ್ಪನ್ನವನ್ನು ಬಿಡುಗಡೆ ಮಾಡಿದೆ.
ಇನ್ನು ಆರೋಗ್ಯ ಉತ್ಪನ್ನ ತಯಾರಿಕಾ ಕಂಪನಿಗಳ ವಹಿವಾಟಿನಲ್ಲಿ ತೀವ್ರ ಹೆಚ್ಚಳವಾಗಿದ್ದು, ಸ್ವಯಂ ಪರೀಕ್ಷೆಗೆ ಅನುಕೂಲವಾಗುವ ಥರ್ಮಾಮೀಟರ್, ಆಕ್ಸಿ ಮೀಟರ್, ಹ್ಯಾಂಡ್ ಗ್ಲೌಸ್, ಪಿಪಿಇ ಕಿಟ್ ಮೊದಲಾದವುಗಳಿಗೆ ಬಹಳ ಡಿಮ್ಯಾಂಡ್ ಇದೆ. ಹೀಗಾಗಿ ಇವುಗಳ ತಯಾರಿಕೆಗೆ ಕಂಪನಿಗಳು ಮುಂದಾಗಿವೆ. ಒಟ್ಟಿನಲ್ಲಿ ಕೊರೊನಾ ಇತರೆ ಕ್ಷೇತ್ರಗಳ ವಹಿವಾಟಿನ ಮೇಲೆ ಆಗಾಧ ಪರಿಣಾಮ ಬೀರಿದ್ದರೂ, ಅನೇಕ ಕ್ಷೇತ್ರಗಳ ವಹಿವಾಟಿನಲ್ಲಿ ಮಾತ್ರ ದಿನೇ ದಿನೇ ಹೆಚ್ಚಳವಾಗತೊಡಗಿದೆ.