ಕೊರೊನಾದಿಂದಾಗಿ ವಿಶ್ವ ಆರ್ಥಿಕತೆಯಲ್ಲಿ ಕುಸಿತ ಕಂಡು ಬಂದಿದೆ. ಸಾಂಕ್ರಾಮಿಕ ರೋಗ ಭಾರತದ ಆರ್ಥಿಕತೆಯ ಮೇಲೂ ಗಮನಾರ್ಹ ಪರಿಣಾಮ ಬೀರಿದೆ. ಕೊರೊನಾ ಉದ್ಯೋಗದ ಮೇಲೆ ದೊಡ್ಡ ಮಟ್ಟದಲ್ಲಿ ಪ್ರಭಾವ ಬೀರಿದೆ. ಅನೇಕರು ಉದ್ಯೋಗ ಕಳೆದುಕೊಂಡಿದ್ದಾರೆ.
ನೌಕರರ ಭವಿಷ್ಯ ನಿಧಿ ಸಂಸ್ಥೆಯ ಮಾಹಿತಿಯ ಪ್ರಕಾರ, ಪ್ರಸಕ್ತ 2020-21ರ ಆರ್ಥಿಕ ವರ್ಷದ ಆರಂಭಿಕ ಒಂಬತ್ತು ತಿಂಗಳಲ್ಲಿ 71,01,929 ಭವಿಷ್ಯ ನಿಧಿ ಖಾತೆಗಳನ್ನು ಮುಚ್ಚಲಾಗಿದೆ. ಲೋಕಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಕಾರ್ಮಿಕ ಮತ್ತು ಉದ್ಯೋಗ ಖಾತೆ ರಾಜ್ಯ ಸಚಿವರು ಲಿಖಿತ ಉತ್ತರ ನೀಡಿದ್ದಾರೆ.
ಇಪಿಎಫ್‌ಒ ಪ್ರಕಾರ, 2020 ರ ಏಪ್ರಿಲ್-ಡಿಸೆಂಬರ್ ನಡುವೆ 71,01,929 ಪಿಎಫ್ ಖಾತೆಗಳನ್ನು ಮುಚ್ಚಲಾಗಿದೆ. ಅಕ್ಟೋಬರ್ ತಿಂಗಳಲ್ಲಿ 11,18,751 ಪಿಎಫ್ ಖಾತೆಗಳನ್ನು ಮುಚ್ಚಲಾಗಿದ್ದು, ಸೆಪ್ಟೆಂಬರ್‌ನಲ್ಲಿ 11,18,517 ಪಿಎಫ್ ಖಾತೆಗಳನ್ನು ಮುಚ್ಚಲಾಗಿದೆ. ಪಿಎಫ್ ನಿಧಿಯಿಂದ ಹಣ ಹಿಂಪಡೆಯುವವರ ಸಂಖ್ಯೆಯೂ ಹೆಚ್ಚಾಗಿದೆ. ಏಪ್ರಿಲ್-ಡಿಸೆಂಬರ್ 2020 ರ ನಡುವೆ 73,498 ಕೋಟಿ ರೂಪಾಯಿ ಹಿಂಪಡೆಯಲಾಗಿದೆ.
ಅಂಕಿಅಂಶಗಳ ಪ್ರಕಾರ, 2019-20ರಲ್ಲಿ ಇಪಿಎಫ್‌ನಲ್ಲಿ 1,68,661.07 ಕೋಟಿ ರೂಪಾಯಿಗಳ ಹೂಡಿಕೆ ಮಾಡಲಾಗಿದ್ದು, 2018-19ರಲ್ಲಿ 1,41,346.85 ಕೋಟಿ ರೂಪಾಯಿ ಮತ್ತು 2017-18ರಲ್ಲಿ 1,26,119.92 ಕೋಟಿ ರೂಪಾಯಿ ಹೂಡಿಕೆ ಮಾಡಲಾಗಿತ್ತು.