ನವದೆಹಲಿ: ಜನಸಾಮಾನ್ಯರಿಗೆ ಸಿಹಿ ಸುದ್ದಿ ಇಲ್ಲಿದೆ. ಮುಂದಿನ ಮೂರು ವಾರಗಳಲ್ಲಿ ಅಡುಗೆ ಎಣ್ಣೆ ದರ ಶೇಕಡ 6 ರಷ್ಟು ಕಡಿಮೆಯಾಗಲಿದೆ. ಬ್ರ್ಯಾಂಡ್ ಗಳ ಅನುಸಾರ ಗರಿಷ್ಠ 10 ರೂಪಾಯಿವರೆಗೆ ದರ ಇಳಿಕೆಯಾಗಲಿದ್ದು, ಜನಸಾಮಾನ್ಯರಿಗೆ ಅನುಕೂಲವಾಗುತ್ತದೆ. ಇದು ಹಣದುಬ್ಬರ ಇಳಿಕೆಗೂ ಕಾರಣವಾಗುತ್ತದೆ ಎಂದು ಹೇಳಲಾಗಿದೆ.
ಜಾಗತಿಕ ಮಾರುಕಟ್ಟೆ ದರಗಳಿಗೆ ಅನುಸಾರ ದೇಶದಲ್ಲಿ ರಿಟೇಲ್ ದರ ನಿಗದಿಪಡಿಸುವಂತೆ ಕೇಂದ್ರ ಸರ್ಕಾರ ತೈಲ ಕಂಪನಿಗಳಿಗೆ ಸಲಹೆ ನೀಡಿದ ಹಿನ್ನೆಲೆಯಲ್ಲಿ ಖಾದ್ಯ ತೈಲ ಕಂಪನಿಗಳು ದರ ಇಳಿಕೆಗೆ ಮುಂದಾಗಿವೆ.
ದೇಶದಲ್ಲಿ ಖಾದ್ಯ ತೈಲ ಉತ್ಪಾದನೆಗೆ ಬಳಕೆ ಮಾಡುವ ಶೇಂಗಾ, ಸಾಸಿವೆ, ಸೋಯಾಬಿನ್ ಉತ್ಪಾದನೆ ಉತ್ತಮವಾಗಿದ್ದು, ಎರಡು ತಿಂಗಳಲ್ಲಿ ಜಾಗತಿಕ ಮಟ್ಟದಲ್ಲಿ ಖಾದ್ಯ ತೈಲ ದರ ಗಣನೀಯ ಇಳಿಕೆ ಕಂಡಿದೆ. ಇದರ ಲಾಭವನ್ನು ದೇಶದ ಖಾದ್ಯ ತೈಲ ಕಂಪನಿಗಳು ಗ್ರಾಹಕರಿಗೆ ವರ್ಗಾಯಿಸಿರಲಿಲ್ಲ. ಕೇಂದ್ರದ ಸೂಚನೆ ಮೇರೆಗೆ ಈಗ ದರ ಕಡಿಮೆ ಮಾಡಲು ಕಂಪನಿಗಳು ಮುಂದಾಗಿವೆ.
ಅದಾನಿ ವಿಲ್ಮರ್ ಕಂಪನಿಯ ಫಾರ್ಚ್ಯೂನ್ ಬ್ರ್ಯಾಂಡ್ ನ ತೈಲ ದರ ಲೀಟರ್ ಗೆ 5 ರೂಪಾಯಿ, ಜೆಮಿನಿ ಎಡಿಬಿಲ್ ಅಂಡ್ ಫ್ಯಾಟ್ಸ್ ಇಂಡಿಯಾ ಕಂಪನಿಯ ಜೆಮಿನಿ ಬ್ರ್ಯಾಂಡ್ ತೈಲ ದರ ಲೀಟರ್ ಗೆ 10 ರೂ. ಇಳಿಕೆಯಾಗಲಿದೆ.
ಪಾಮ್ ಆಯಿಲ್ ದರ ಏಪ್ರಿಲ್ ನಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಶೇಕಡ 42ರಷ್ಟು ಇಳಿಕೆಯಾಗಿದ್ದು, ಕಚ್ಚಾ ಸೋಯಾಬಿನ್ ಎಣ್ಣೆ ದರ ಶೇಕಡ 45ರಷ್ಟು, ಸೂರ್ಯಕಾಂತಿ ಎಣ್ಣೆ ದರ ಶೇಕಡ 53 ರಷ್ಟು ಕಡಿಮೆಯಾಗಿದೆ.