ನವದೆಹಲಿ: ವಾರದೊಳಗೆ ಅಡುಗೆ ಎಣ್ಣೆ ದರದಲ್ಲಿ 10 ರೂಪಾಯಿ ಕಡಿಮೆ ಮಾಡಲು ಸರ್ಕಾರ ಸೂಚನೆ ನೀಡಿದೆ. ಸೂರ್ಯಕಾಂತಿ ಎಣ್ಣೆ, ಶೇಂಗಾ ಎಣ್ಣೆ ಸೇರಿದಂತೆ ಅಡುಗೆ ಎಣ್ಣೆಗಳ ದರವನ್ನು ವಾರದೊಳಗೆ 10 ರೂಪಾಯಿ ಕಡಿತಗೊಳಿಸುವಂತೆ ಕಂಪನಿಗಳಿಗೆ ಕೇಂದ್ರ ಸರ್ಕಾರದಿಂದ ಸೂಚನೆ ನೀಡಲಾಗಿದೆ.
ಆಹಾರ ಸಚಿವಾಲಯದ ಕಾರ್ಯದರ್ಶಿ ಸುಧಾಂಶ ಪಾಂಡೆ ಈ ಬಗ್ಗೆ ಸೂಚನೆ ನೀಡಿದ್ದಾರೆ. ಆಹಾರ ಸಚಿವಾಲಯ ಮತ್ತು ತೈಲ ಉತ್ಪಾದಕರೊಂದಿಗೆ ನಡೆದ ಸಭೆಯಲ್ಲಿ ಅವರು ಸೂಚನೆ ನೀಡಿದ್ದು, ಕಳೆದ ಒಂದು ವಾರದ ಅವಧಿಯಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಅಡುಗೆ ಎಣ್ಣೆ ದರ ಶೇಕಡ 10ರಷ್ಟು ಇಳಿಕೆಯಾಗಿದ್ದು, ದೇಶದ ಗ್ರಾಹಕರಿಗೆ ಅದರ ಲಾಭವನ್ನು ಹಸ್ತಾಂತರಿಸಬೇಕು ಎಂದು ತಿಳಿಸಿದ್ದಾರೆ.
ವಿವಿಧ ಕಂಪನಿಗಳ ಒಂದೇ ಬ್ರಾಂಡ್ ಅಡುಗೆ ಎಣ್ಣೆಗಳಿಗೆ ಪ್ರತಿ ಲೀಟರ್ ಗೆ 3 ರಿಂದ 5 ರೂಪಾಯಿವರೆಗೆ ಎಂ.ಆರ್.ಪಿ.ಯಲ್ಲಿ ವ್ಯತ್ಯಾಸವಿದ್ದು ತೈಲ ಕಂಪನಿಗಳು ಈ ಬಗ್ಗೆ ಕ್ರಮ ಕೈಗೊಳ್ಳಬೇಕು. ಎಂ.ಆರ್.ಪಿ.ಯಲ್ಲಿ ಏಕರೂಪವನ್ನು ಕಾಯ್ದುಕೊಳ್ಳಬೇಕೆಂದು ಹೇಳಲಾಗಿದೆ.