ನವದೆಹಲಿ: ಕಳೆದ ವರ್ಷ ಕೊರೊನಾ ಕಾರಣದಿಂದಾಗಿ ಸಂಬಳ ಪಡೆಯುವ ನೌಕರರ ವೇತನದಲ್ಲಿ ಹೆಚ್ಚಳ ಆಗಿರಲಿಲ್ಲ. ಅನೇಕ ಕಂಪನಿಗಳು ಸಂಬಳದಲ್ಲಿ ಕಡಿತ ಮಾಡಿದ್ದವು. ಆದರೆ ಈ ವರ್ಷ ಉದ್ಯೋಗಿಗಳಿಗೆ ಸಿಹಿ ಸುದ್ದಿಯೊಂದು ಸಿಗಲಿದೆ.
ಸಮೀಕ್ಷೆಯೊಂದರ ಪ್ರಕಾರ, ಭಾರತದ ಕಂಪನಿಗಳು ತಮ್ಮ ನೌಕರರ ವೇತನವನ್ನು ಸರಾಸರಿ 7.3 ರಷ್ಟು ಹೆಚ್ಚಿಸಬಹುದು ಎನ್ನಲಾಗ್ತಿದೆ. ನಿರೀಕ್ಷೆಗಿಂತ ಉತ್ತಮ ಆರ್ಥಿಕ ಚೇತರಿಕೆ, ವ್ಯಾಪಾರ ಮತ್ತು ಗ್ರಾಹಕರ ಬೇಡಿಕೆ ಹೆಚ್ಚಾಗುವುದರಿಂದ ಕಂಪನಿಗಳು ಉದ್ಯೋಗಿಗಳ ಸಂಬಳ ಹೆಚ್ಚಿಸಲಿವೆ ಎನ್ನಲಾಗ್ತಿದೆ.
ಈ ಸಮೀಕ್ಷೆಯನ್ನು ಡಿಟಿಟಿಎಲ್ಪಿ ಮಾಡಿದೆ. ಈ ವರ್ಷ ಸರಾಸರಿ ವೇತನ ಏರಿಕೆ 2020ಕ್ಕಿಂತ ಶೇಕಡಾ 4.4 ರಷ್ಟು ಹೆಚ್ಚಾಗಲಿದೆ. ಆದರೆ 2019ಕ್ಕೆ ಹೋಲಿಕೆ ಮಾಡಿದ್ರೆ ಕಡಿಮೆಯಿರುತ್ತದೆ ಎಂದು ಹೇಳಿದೆ. ಈ ಸಮೀಕ್ಷೆಯಲ್ಲಿ ಭಾಗವಹಿಸಿದ ಶೇಕಡಾ 92 ಕಂಪನಿಗಳು ಈ ವರ್ಷ ತಮ್ಮ ಉದ್ಯೋಗಿಗಳಿಗೆ ಹೆಚ್ಚಳ ನೀಡುವುದಾಗಿ ಹೇಳಿವೆ.
ಸಮೀಕ್ಷೆ 2020 ರ ಡಿಸೆಂಬರ್‌ನಲ್ಲಿ ಪ್ರಾರಂಭವಾಗಿತ್ತು. ಇದರಲ್ಲಿ 7 ವಲಯಗಳು ಮತ್ತು 25 ಉಪ ವಲಯಗಳ 400 ಸಂಸ್ಥೆಗಳು ಸೇರಿವೆ. ಸಮೀಕ್ಷೆಯ ಪ್ರಕಾರ, ಭಾರತದ ಕಂಪನಿಗಳು ಈ ವರ್ಷ ಸರಾಸರಿ ವೇತನವನ್ನು ಶೇಕಡಾ 7.3 ರಷ್ಟು ಹೆಚ್ಚಿಸಲಿವೆ. ಸಮೀಕ್ಷೆಯ ಪ್ರಕಾರ, ಈ ವರ್ಷ ಶೇಕಡಾ 20 ರಷ್ಟು ಕಂಪನಿಗಳು ತಮ್ಮ ನೌಕರರ ವೇತನವನ್ನು ಎರಡು ಅಂಕೆಗಳಲ್ಲಿ ಹೆಚ್ಚಿಸಲು ಹೊರಟಿವೆ. ಕಳೆದ ವರ್ಷ ಕೇವಲ ಶೇಕಡಾ 12ರಷ್ಟು ಕಂಪನಿಗಳು ನೌಕರರ ವೇತನವನ್ನು ಎರಡಂಕಿ ಹೆಚ್ಚಿಸಿದ್ದವು.
ಸಮೀಕ್ಷೆಯ ಪ್ರಕಾರ, ಐಟಿ ವಲಯದಲ್ಲಿ ವೇತನ ಹೆಚ್ಚಾಗಲಿದೆ. ಆದರೆ ಉತ್ಪಾದನೆ ಮತ್ತು ಸೇವಾ ಕ್ಷೇತ್ರಗಳಲ್ಲಿ ನೌಕರರ ವೇತನ ಸ್ಪಲ್ಪ ಮಟ್ಟಿಗೆ ಹೆಚ್ಚಾಗಲಿದೆ. ಇ-ಕಾಮರ್ಸ್ ಕಂಪನಿಗಳು ಮತ್ತು ಡಿಜಿಟಲ್ ವಲಯದ ಕಂಪನಿಗಳು ಮಾತ್ರ 2021 ರಲ್ಲಿ ತಮ್ಮ ಸಂಬಳವನ್ನು ಎರಡು ಅಂಕೆಗಳಲ್ಲಿ ಹೆಚ್ಚಿಸಲಿವೆ ಎಂದು ಸಮೀಕ್ಷೆಯಲ್ಲಿ ಹೇಳಲಾಗಿದೆ.