ಚಿಕ್ಕಬಳ್ಳಾಪುರ: ಕೆಜಿಗೆ 100 ರೂಪಾಯಿವರೆಗೂ ತಲುಪಿದ್ದ ಈರುಳ್ಳಿ ದರ ಗ್ರಾಹಕರಿಗೆ ಕಣ್ಣೀರು ತರಿಸಿತ್ತು. ಪ್ರಸ್ತುತ ಈರುಳ್ಳಿ ದರ ಕೊಂಚ ಕಡಿಮೆಯಾಗಿದೆ. ಈಗ ಬೆಳ್ಳುಳ್ಳಿ ದರ ಭಾರಿ ಏರಿಕೆ ಕಂಡಿದೆ.
ಬೆಳ್ಳುಳ್ಳಿ ದರ ಕಳೆದ ಒಂದೂವರೆ ತಿಂಗಳ ಅವಧಿಯಲ್ಲಿ ದುಪ್ಪಟ್ಟಾಗಿದ್ದು, ಮಾರುಕಟ್ಟೆಯಲ್ಲಿ ಕೆಜಿ ಬೆಳ್ಳುಳ್ಳಿ ದರ 300 ರೂ. ಸಮೀಪಕ್ಕೆ ಬಂದಿದೆ. ತಿಂಗಳ ಹಿಂದೆ 90 -120 ರೂ.ವರೆಗೂ ಬೆಳ್ಳುಳ್ಳಿ ಮಾರಾಟವಾಗುತ್ತಿತ್ತು. ಈಗ 300 ರೂಪಾಯಿ ಸಮೀಪಕ್ಕೆ ಬಂದಿದ್ದು, ಗ್ರಾಹಕರಿಗೆ ಬೆಲೆ ಏರಿಕೆ ಬಿಸಿ ತಟ್ಟಿದೆ.
ಬೇಡಿಕೆಗಿಂತ ಪೂರೈಕೆ ಕಡಿಮೆಯಾಗಿರುವುದೇ ಬೆಳ್ಳುಳ್ಳಿ ದರ ಏರಿಕೆಗೆ ಕಾರಣವಾಗಿದೆ. ಒಂದು ಚೀಲ ಬೆಳ್ಳುಳ್ಳಿಗೆ 10,000 ರೂ. ಇದೆ. ಚಿಲ್ಲರೆ ಮಾರಾಟ ದರ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ. ಮುಂಗಾರು ಕೊರತೆ ಕಾರಣ ಬರಗಾಲದ ಪರಿಸ್ಥಿತಿ ಇರುವುದರಿಂದ ಬೆಳ್ಳುಳ್ಳಿ ದರ ಏರುಗತಿಯಲ್ಲಿ ಸಾಗಲಿದೆ ಎಂದು ಹೇಳಲಾಗಿದೆ.