ತುಮಕೂರು: ಬೆಲೆ ಕುಸಿತದಿಂದ ಕಂಗಾಲಾಗಿದ್ದ ತೆಂಗು ಬೆಳೆಗಾರರಿಗೆ ನೆಮ್ಮದಿಯ ಸುದ್ದಿ ಸಿಕ್ಕಿದೆ. ನಾಫೆಡ್ ಸಂಸ್ಥೆ ಮೂಲಕ ಉಂಡೆ ಕೊಬ್ಬರಿ ಖರೀದಿಗೆ ರಾಜ್ಯ ಸರ್ಕಾರ ಸಮ್ಮತಿಸಿದ್ದು, ಮಂಗಳವಾರ ಆದೇಶ ಹೊರ ಬಿದ್ದಿದೆ.
ಜನವರಿ 20 ರಿಂದ ನೋಂದಣಿ ಪ್ರಕ್ರಿಯೆ ಆರಂಭವಾಗಲಿದೆ. 12,000 ರೂ. ಎಂ.ಎಸ್.ಪಿ.ಯೊಂದಿಗೆ 1500 ರೂ. ಪ್ರೋತ್ಸಾಹಧನವನ್ನು ರಾಜ್ಯ ಸರ್ಕಾರ ಘೋಷಿಸಿದೆ. ಕ್ವಿಂಟಾಲ್ ಗೆ 13,500 ರೂ. ದರದಲ್ಲಿ ಕೊಬ್ಬರಿ ಖರೀದಿಸಲಾಗುವುದು. ಕೊಬ್ಬರಿ ಖರೀದಿ ಪ್ರಕ್ರಿಯೆ ನಡೆದ ಮೂರು ದಿನಗಳಲ್ಲಿ ಖಾತೆಗೆ ಹಣ ಜಮಾ ಮಾಡಬೇಕೆಂದು ರೈತರು ಬೇಡಿಕೆ ಇಟ್ಟಿದ್ದಾರೆ.
ಹಾಸನ, ತುಮಕೂರು, ಮಂಡ್ಯ, ಮೈಸೂರು, ಚಿಕ್ಕಮಗಳೂರು, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಕೊಬ್ಬರಿ ಖರೀದಿಸಲು ಆದೇಶಿಸಲಾಗಿದೆ. ಜನವರಿ 20 ರಿಂದ 45 ದಿನಗಳ ಕಾಲ ರೈತರು ನೋಂದಾಯಿಸಿಕೊಳ್ಳಬಹುದಾಗಿದ್ದು, ಮೂರು ತಿಂಗಳ ಕಾಲ ಕೊಬ್ಬರಿ ಖರೀದಿಸಲಾಗುವುದು. ಪ್ರತಿ ಎಕರೆಗೆ ಗರಿಷ್ಠ 6 ಕ್ವಿಂಟಲ್, ಪ್ರತಿ ರೈತರಿಂದ ಗರಿಷ್ಠ 20 ಕ್ವಿಂಟಲ್ ಕೊಬ್ಬರಿ ಖರೀದಿಸಲಾಗುತ್ತದೆ ಎಂದು ಹೇಳಲಾಗಿದೆ.