ನವದೆಹಲಿ: ಪ್ರಾಥಮಿಕ ಕೃಷಿ ಸಹಕಾರಿ ಸಂಘಗಳಲ್ಲಿ ಇನ್ನು ಮುಂದೆ ಪಡಿತರ ಮತ್ತು ಪೆಟ್ರೋಲ್ ಸಿಗಲಿದೆ. ಪ್ರಾಥಮಿಕ ಕೃಷಿ ಸಾಲ ನೀಡುವ ಸಹಕಾರಿ ಸಂಘಗಳಿಗೆ ಪೆಟ್ರೋಲಿಯಂ ಉತ್ಪನ್ನಗಳ ಮಾರಾಟ, ನ್ಯಾಯಬೆಲೆ ಅಂಗಡಿಗಳನ್ನು ನಡೆಸುವುದು, ಆಸ್ಪತ್ರೆ, ಶೈಕ್ಷಣಿಕ ಸಂಸ್ಥೆಗಳ ಅಭಿವೃದ್ಧಿ ಸೇರಿದಂತೆ ಹಲವು ಚಟುವಟಿಕೆಗಳಲ್ಲಿ ಭಾಗಿಯಾಗಲು ಅನುಮತಿ ನೀಡಲಾಗುವುದು.
ಕೇಂದ್ರ ಸರ್ಕಾರ ಹೊಸ ಮಸೂದೆ ಒಂದನ್ನು ಪ್ರಸ್ತಾಪಿಸಿದೆ. 100ನೇ ಅಂತರರಾಷ್ಟ್ರೀಯ ಸಹಕಾರಿ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಕೇಂದ್ರ ಸಹಕಾರ ಸಚಿವ ಅಮಿತ್ ಶಾ ಅವರು ಹೊಸ ಮಸೂದೆಯ ಬಗ್ಗೆ ಘೋಷಣೆ ಮಾಡಿದ್ದಾರೆ.
ಸಹಕಾರ ಸಚಿವಾಲಯದಿಂದ ಮಂಡಿಸಲಾದ ಮಸೂದೆಗೆ ಪ್ರಧಾನಿ ಮೋದಿ ನೇತೃತ್ವದ ಆರ್ಥಿಕ ವ್ಯವಹಾರಗಳ ಕ್ಯಾಬಿನೆಟ್ ಸಮಿತಿ ಅನುಮೋದನೆ ನೀಡಿದೆ. ರಾಜ್ಯ ಸರ್ಕಾರಗಳು ಮತ್ತು ಇತರೆ ಮಧ್ಯಸ್ಥಿಕೆಗಾರರಿಗೆ ಜುಲೈ 19 ರೊಳಗೆ ಸಲಹೆ ನೀಡುವಂತೆ ತಿಳಿಸಲಾಗಿದೆ ಎಂದರು.
ದೇಶದಲ್ಲಿ 63,000 ಪ್ರಾಥಮಿಕ ಕೃಷಿ ಸಾಲ ಸಂಘಗಳಿದ್ದು, 13 ಕೋಟಿ ರೈತರು ಸದಸ್ಯತ್ವ ಪಡೆದುಕೊಂಡಿದ್ದಾರೆ. ಇಂತಹ ಸಂಘಗಳಲ್ಲಿ ಪೆಟ್ರೋಲಿಯಂ ಉತ್ಪನ್ನಗಳ ಮಾರಾಟ ಮತ್ತು ನ್ಯಾಯಬೆಲೆ ಅಂಗಡಿಗಳನ್ನು ನಡೆಸುವುದು ಸೇರಿದಂತೆ ಅನೇಕ ಚಟುವಟಿಕೆಗಳಲ್ಲಿ ಭಾಗಿಯಾಗಲು ಅನುಮತಿ ನೀಡಲಾಗುವುದು ಎಂದರು.