ಬೆಂಗಳೂರು: ಸಹಕಾರ ಇಲಾಖೆ ಕೋವಿಡ್ ಹಿನ್ನೆಲೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಹಕಾರ ಕ್ಷೇತ್ರದ ವಿವಿಧ ಯೋಜನೆಗಳ ಆರ್ಥಿಕ ಸ್ಪಂದನ ಕಾರ್ಯಕ್ರಮ ಹಮ್ಮಿಕೊಂಡಿದೆ.
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಇಂದು ಬೆಳಗ್ಗೆ 11 ಗಂಟೆಗೆ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಉದ್ಘಾಟನೆ ನೆರವೇರಿಸಲಿದ್ದಾರೆ. ಶಾಸಕ ರಿಜ್ವಾನ್ ಅರ್ಷದ್ ಅಧ್ಯಕ್ಷತೆ ವಹಿಸಲಿದ್ದು ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಉಪಸ್ಥಿತರಿರುವರು.
ಕೃಷಿ ಕ್ಷೇತ್ರಕ್ಕೆ 15,300 ಕೋಟಿ ರೂ., ಕೃಷಿಯೇತರ ಕ್ಷೇತ್ರಕ್ಕೆ 24 ಸಾವಿರ ಕೋಟಿ ರೂಪಾಯಿ ಸೇರಿ ಒಟ್ಟಾರೆ 39,300 ಕೋಟಿ ರೂಪಾಯಿ ಸಾಲ ವಿತರಣೆ ಗುರಿ ಹೊಂದಲಾಗಿದೆ. 2020 -21 ನೇ ಸಾಲಿನಲ್ಲಿ 24.50 ಲಕ್ಷ ರೈತರಿಗೆ ಶೂನ್ಯ ಬಡ್ಡಿದರದಲ್ಲಿ 14,500 ಕೋಟಿ ರೂ ಬೆಳೆ ಸಾಲ ನೀಡುವ ಗುರಿ ಹೊಂದಲಾಗಿದ್ದು, ಇದುವರೆಗೆ 11,88,659 ರೈತರಿಗೆ 7,777.41 ಕೋಟಿ ರೂ. ಸಾಲವನ್ನು ಈ ಸಾಲಿನಲ್ಲಿ ವಿತರಿಸಲಾಗಿದೆ.
ಸ್ವಸಹಾಯ ಗುಂಪು, ಸ್ತ್ರೀಶಕ್ತಿ ಸಂಘಗಳಿಗೆ ಶೂನ್ಯ ಬಡ್ಡಿದರದಲ್ಲಿ ಸಾಲ ವಿತರಿಸಿದ್ದು 71,657 ಗುಂಪುಗಳಿಗೆ 1,421.83 ಕೋಟಿ ರೂ. ಸಾಲ ವಿತರಿಸಲಾಗಿದೆ. ಹೈನುಗಾರರಿಗೆ ಪ್ರತಿ ಲೀಟರಿಗೆ 5 ರೂಪಾಯಿ ಪ್ರೋತ್ಸಾಹ ಧನದಂತೆ 1,885.88 ಕೋಟಿ ರೂ. ವಿತರಿಸಲಾಗಿದೆ. ಸಹಕಾರ ಕ್ಷೇತ್ರದ ಪಟ್ಟಣ ಸಹಕಾರ ಬ್ಯಾಂಕುಗಳ ಸದಸ್ಯರಿಗೆ ಕೋವಿಡ್ ಸಂದರ್ಭದಲ್ಲಿ 3,177.80 ಕೋಟಿ ರೂ. ಸಾಲ ವಿತರಿಸಲಾಗಿದೆ. ಕೊರೋನಾ ವಾರಿಯರ್ಸ್ ಗಳಾದ ಆಶಾ ಕಾರ್ಯಕರ್ತೆಯರಿಗೆ ತಲಾ ಮೂರು ಸಾವಿರ ಪ್ರೋತ್ಸಾಹಧನ ನೀಡಲಾಗಿದ್ದು 42,524 ಕಾರ್ಯಕರ್ತೆಯರಿಗೆ 12.75 ಕೋಟಿ ರೂ. ವಿತರಿಸಲಾಗಿದೆ.