ಮುಂಬೈ: ಸಂಕುಚಿತ ನೈಸರ್ಗಿಕ ಅನಿಲದ(CNG) ಬೆಲೆ ಭಾನುವಾರದಿಂದ ಏರಿಕೆಯಾಗಿದೆ. CNG ಪ್ರತಿ ಕೆಜಿಗೆ 2.50 ರೂಪಾಯಿಗಳಷ್ಟು ದುಬಾರಿಯಾಗಿರುತ್ತದೆ, ತೆರಿಗೆಗಳು ಸೇರಿದಂತೆ ಪೈಪ್ಡ್ ಅಡುಗೆ ಅನಿಲದ ದರವು ಪ್ರತಿ ಯೂನಿಟ್ ಗೆ 1.50 ರೂಪಾಯಿಗಳಷ್ಟು ಹೆಚ್ಚಾಗುತ್ತದೆ.
ದೇಶೀಯ ಅನಿಲ ಹಂಚಿಕೆಯಲ್ಲಿನ ಕೊರತೆ ಪೂರೈಸಲು MGL ಕ್ರಮಕೈಗೊಂಡಿದೆ. ಗ್ಯಾಸ್‌ನ ಇನ್ ಪುಟ್ ವೆಚ್ಚದಲ್ಲಿನ ಹೆಚ್ಚಳ ಭಾಗಶಃ ಸರಿದೂಗಿಸಲು, ವಿತರಣೆಯನ್ನು ಹೆಚ್ಚಿಸಲು MGL ನಿರ್ಬಂಧಿತವಾಗಿದ್ದು, ಮುಂಬೈ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಿಎನ್‌ಜಿ ಬೆಲೆ 2.50 ರೂ./ಕೆಜಿ ಮತ್ತು ಡೊಮೆಸ್ಟಿಕ್ ಪಿಎನ್‌ಜಿ 1.50 ರೂ./ಎಸ್‌ಸಿಎಂ ಹೆಚ್ಚಳವಾಗಿದೆ ಎಂದು GAIL ಲಿಮಿಟೆಡ್ ಮತ್ತು ಮಹಾರಾಷ್ಟ್ರ ಸರ್ಕಾರದ ಉದ್ಯಮವಾದ ಮಹಾನಗರ ಗ್ಯಾಸ್ ಲಿಮಿಟೆಡ್(MGL) ಹೇಳಿಕೆ ತಿಳಿಸಿದೆ.
ಇತ್ತೀಚಿನ ಹೆಚ್ಚಳದ ನಂತರ, CNG ಈಗ ಪ್ರತಿ ಕೆಜಿಗೆ 66 ರೂ ಮತ್ತು PNG ಪ್ರತಿ ಸ್ಟ್ಯಾಂಡರ್ಡ್ ಕ್ಯೂಬಿಕ್ ಮೀಟರ್ (SCM) ಗೆ 39.50 ರೂ.ಗೆ ಲಭ್ಯವಿರುತ್ತದೆ. ಮುಂಬೈ ಮಹಾನಗರ ಪ್ರದೇಶದಲ್ಲಿ CNG ದರವನ್ನು ಕಳೆದ ಒಂದು ವರ್ಷದಲ್ಲಿ 18 ರೂ. ಕ್ಕಿಂತ ಹೆಚ್ಚು ಹೆಚ್ಚಳ ಮಾಡಲಾಗಿದೆ. ಇದು ಕಳೆದ ಮೂರು ತಿಂಗಳಲ್ಲಿ CNG ಬೆಲೆಗಳಲ್ಲಿ ಐದನೇ ಹೆಚ್ಚಳವಾಗಿದೆ.
ಪೆಟ್ರೋಲ್ ಮತ್ತು ಡೀಸೆಲ್‌ಗೆ ಹೋಲಿಸಿದರೆ ಸಿಎನ್‌ಜಿಯನ್ನು ಹಸಿರು ಇಂಧನಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ಇತರ ಇಂಧನಗಳಿಗೆ ಹೋಲಿಸಿದರೆ ಇದು ಅಗ್ಗವಾಗಿದೆ. ಸಾಮಾನ್ಯವಾಗಿ ಸಾರ್ವಜನಿಕ ಸಾರಿಗೆಗಳಾದ ಆಟೋ ರಿಕ್ಷಾಗಳು, ಟ್ಯಾಕ್ಸಿಗಳು, ದೊಡ್ಡ ವಾಣಿಜ್ಯ ವಾಹನಗಳು ಪೆಟ್ರೋಲ್ ಮತ್ತು ಡೀಸೆಲ್‌ಗಿಂತ CNG ಗೆ ಆದ್ಯತೆ ನೀಡುತ್ತವೆ. ಕಳೆದ ಒಂದು ವರ್ಷದಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀಟರ್‌ಗೆ 100 ರೂ. ಮುಟ್ಟಿದ ನಂತರ ಅನೇಕ ಪ್ರಯಾಣಿಕ ವಾಹನಗಳು ಸಿಎನ್‌ಜಿಗೆ ಸ್ಥಳಾಂತರಗೊಂಡವು. ಕಳೆದ ಕೆಲವು ತಿಂಗಳುಗಳಲ್ಲಿ ಸಿಎನ್‌ಜಿ ಬೆಲೆಗಳ ಸರಣಿ ಏರಿಕೆಯಿಂದಾಗಿ, ಈ ವಾಹನ ಮಾಲೀಕರಿಗೆ ತೀವ್ರ ತೊಂದರೆಯಾಗಲಿದೆ.
ಪೈಪ್ ಮೂಲಕ ಅಡುಗೆ ಅನಿಲ ಬಳಸುವ ಮನೆಗಳಿಗೂ ಈ ಬೆಲೆ ಏರಿಕೆ ಬಿಸಿ ತಟ್ಟಲಿದೆ. ಮಹಾನಗರ ಮತ್ತು ನೆರೆಯ ಪ್ರದೇಶಗಳಲ್ಲಿ ವಾಸಿಸುವ 16 ಲಕ್ಷ ಜನರು ಮತ್ತು ಅನಿಲ ಚಾಲಿತ ವಾಹನಗಳನ್ನು ಬಳಸುವ ಎಂಟು ಲಕ್ಷ ಗ್ರಾಹಕರ ಬಜೆಟ್‌ಗಳು ಹೆಚ್ಚಾಗಲಿವೆ ಎಂದು ವರದಿಗಳು ತಿಳಿಸಿವೆ.
ಟ್ಯಾಕ್ಸಿಗಳ ದರವನ್ನು ರಾಜ್ಯ ಸರ್ಕಾರ ಹೆಚ್ಚಿಸದಿದ್ದರೆ ಮುಷ್ಕರ ನಡೆಸುವುದಾಗಿ ಟ್ಯಾಕ್ಸಿ ಸಂಘಟನೆಗಳು ಬೆದರಿಕೆ ಹಾಕಿವೆ. ಟ್ಯಾಕ್ಸಿ ಚಾಲಕರು ನಷ್ಟದಲ್ಲಿ ಕಾರ್ಯನಿರ್ವಹಿಸಲು ಸಾಧ್ಯವಿಲ್ಲ. ನಾವು ಈಗಾಗಲೇ 2021 ರಲ್ಲಿ ಸಾಕಷ್ಟು ನಷ್ಟ ಅನುಭವಿಸಿದ್ದೇವೆ. ಸಿಎನ್‌ಜಿ ಮತ್ತು ಪಿಎನ್‌ಜಿ ಬೆಲೆಗಳು ಸಾಕಷ್ಟು ಹೆಚ್ಚಾಗುತ್ತಿವೆ. ಸರ್ಕಾರವು ಪ್ರಯಾಣ ದರವನ್ನು ಹೆಚ್ಚಿಸದಿದ್ದರೆ ನಾವು ಮುಷ್ಕರ ನಡೆಸುತ್ತೇವೆ ಎಂದು ಮುಂಬೈ ಟ್ಯಾಕ್ಸಿ ಒಕ್ಕೂಟದ ನಾಯಕ ಎ.ಎಲ್. ಕ್ವಾಡ್ರೋಸ್ ಹೇಳಿದ್ದಾರೆ.