ಬೆಂಗಳೂರು: ಕೊರೋನಾದಿಂದ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ರಾಜ್ಯ ಸರ್ಕಾರ ಬಜೆಟ್ ಮಂಡನೆ ವೇಳೆ ಕೆಲವು ಯೋಜನೆಗಳಿಗೆ ಕತ್ತರಿ ಹಾಕುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಬಡವರ ಬಂಧು ಯೋಜನೆ, ಕುರಿ ಸಾವಿಗೆ ಪರಿಹಾರ, ಸಮುದಾಯ ಭವನ ಅನುದಾನ, ತೀರ್ಥಯಾತ್ರೆ ಯೋಜನೆ, ಒಂದೇ ರಸ್ತೆಗೆ ಜಿಲ್ಲಾ, ತಾಲೂಕು ಪಂಚಾಯಿತಿಯಿಂದ ಪ್ರತ್ಯೇಕ ಅನುದಾನ, ಅಧ್ಯಯನ ಪ್ರವಾಸ, ಅನಗತ್ಯ ಆಡಳಿತಾತ್ಮಕ ವೆಚ್ಚಗಳಿಗೆ ಕತ್ತರಿ ಹಾಕುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಬಜೆಟ್ ಮಂಡನೆಗೆ ಪೂರ್ವಸಿದ್ಧತೆ ಕೈಗೊಂಡಿದ್ದು, ಇಲಾಖೆಗಳ ಸಭೆ ನಡೆಸಿದ್ದಾರೆ. ಬಜೆಟ್ ಗಾತ್ರದಲ್ಲಿ ಶೇಕಡ 10 ರಷ್ಟು ಕಡಿತ ಮಾಡುವ ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ. ಆರ್ಥಿಕ ಸಂಕಷ್ಟದ ಹಿನ್ನೆಲೆಯಲ್ಲಿ ಅಳೆದು-ತೂಗಿ ಲೆಕ್ಕಾಚಾರ ಹಾಕಲಾಗುತ್ತಿದೆ.
ಸಿದ್ದರಾಮಯ್ಯ ಅವಧಿಯಲ್ಲಿ ಜಾರಿಗೆ ತಂದಿದ್ದ ಅನ್ನಭಾಗ್ಯ ಯೋಜನೆ ಅಡಿಯಲ್ಲಿ ಪ್ರತಿ ವ್ಯಕ್ತಿಗೆ ನೀಡಲಾಗುತ್ತಿರುವ ಅಕ್ಕಿಯ ಪ್ರಮಾಣವನ್ನು 2 ಕೆಜಿ ಇಳಿಕೆ ಮಾಡುವ ಸಾಧ್ಯತೆ ಇದ್ದು, ಇದಕ್ಕೆ ಬದಲಾಗಿ ರಾಗಿ ಮತ್ತು ಜೋಳ ನೀಡಲು ಚಿಂತನೆ ನಡೆಸಿದೆ. ಆಕಸ್ಮಿಕವಾಗಿ ಸಾವಿಗೀಡಾಗುವ ಕುರಿಗಳಿಗೆ ನೀಡುವ ಪರಿಹಾರ ಧನ ಯೋಜನೆಯನ್ನು ಸ್ಥಗಿತಗೊಳಿಸಲಾಗುವುದು ಎಂದು ಹೇಳಲಾಗಿದೆ.
ಅಲ್ಲದೆ, ಹೆಚ್.ಡಿ. ಕುಮಾರಸ್ವಾಮಿ ಘೋಷಿಸಿದ ಮಹತ್ವಾಕಾಂಕ್ಷೆಯ ಬಡವರ ಬಂಧು ಯೋಜನೆಯನ್ನು ಕೈಬಿಡುವ ಸಾಧ್ಯತೆ ಇದೆ. ಈ ಯೋಜನೆಯಡಿ ಬೀದಿ ವ್ಯಾಪಾರಿಗಳಿಗೆ ಬಡ್ಡಿರಹಿತವಾಗಿ ಎರಡರಿಂದ ಹತ್ತು ಸಾವಿರ ರೂಪಾಯಿ ಸಾಲ ನೀಡಲಾಗುತ್ತದೆ. ಯೋಜನೆಯನ್ನು ನಿಲ್ಲಿಸಬಹುದು ಎಂದು ಹೇಳಲಾಗಿದೆ.