ಕಳೆದ ಎರಡು ದಿನದ ಅವಧಿಯಲ್ಲಿ ಕೋಳಿ ಮಾಂಸದ ದರ ದಿಢೀರ್ ಏರಿಕೆಯಾಗಿದೆ. ರಾಜ್ಯದ ಹಲವೆಡೆ ಪ್ರತಿ ಕೆಜಿಗೆ ಎರಡು ದಿನದ ಅವಧಿಯಲ್ಲಿ 40 ರಿಂದ 50 ರೂಪಾಯಿಯಷ್ಟು ಹೆಚ್ಚಳವಾಗಿದೆ.
ಕಳೆದ ಭಾನುವಾರ 1 ಕೆಜಿ ಚಿಕನ್ ಗೆ 160 ರೂಪಾಯಿ ಇತ್ತು. ಆದರೆ ಏಕಾಏಕಿ 40 ರಿಂದ 50 ರೂಪಾಯಿ ಹೆಚ್ಚಳವಾಗಿದ್ದು 210 ರೂ. ದಾಟಿದೆ. ಇನ್ನು ಕೆಲವೆಡೆ ಕೆಜಿಗೆ 250 ರೂಪಾಯಿ ದರದಲ್ಲಿ ಚಿಕನ್ ಮಾರಾಟ ಮಾಡಲಾಗುತ್ತಿದೆ ಎಂದು ಹೇಳಲಾಗಿದೆ.
ಕೋಳಿ ಫಾರಂಗಳಿಂದ ಕೋಳಿ ಮಾಂಸದ ಅಂಗಡಿಗಳಿಗೆ ಪ್ರತಿ ಕೆಜಿಗೆ 105 ರೂಪಾಯಿಂದ 135 ರೂಪಾಯಿವರೆಗೆ ಕೋಳಿ ಮಾರಾಟ ಮಾಡಲಾಗುತ್ತಿದೆ. ಅದರ ಮೇಲೆ 25 ರಿಂದ 30 ರೂಪಾಯಿ ಹೆಚ್ಚುವರಿಯಾಗಿ ಮಾರಾಟ ಮಾಡಬಹುದು. ಆದರೆ, ಕೋಳಿ ಮಾಂಸದ ಅಂಗಡಿಯವರು ಏಕಾಏಕಿ 60 ರಿಂದ 70 ರೂಪಾಯಿಯ ದರ ಹೆಚ್ಚಳ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.
ಕೊರೋನಾ ಲಾಕ್ಡೌನ್ ಮತ್ತು ಹಕ್ಕಿಜ್ವರ ಭೀತಿಯಿಂದ ಕುಕ್ಕುಟೋದ್ಯಮ ಸಂಕಷ್ಟಕ್ಕೆ ಸಿಲುಕಿದ್ದು, ಇತ್ತೀಚೆಗೆ ಚೇತರಿಸಿಕೊಂಡಿದೆ. ಕೋಳಿ ಪೂರೈಕೆಯಲ್ಲಿ ವ್ಯತ್ಯಯವಾದ ಕಾರಣ ದರ ಹೆಚ್ಚಳವಾಗಿದೆ. ಏಕಾಏಕಿ ದರ 50 ರೂ. ನಷ್ಟು ಹೆಚ್ಚಳವಾಗಿರುವುದು ಚಿಕನ್ ಪ್ರಿಯರಿಗೆ ನುಂಗಲಾರದ ತುತ್ತಾಗಿದೆ.