ಬೆಂಗಳೂರು: ತರಕಾರಿ, ದಿನಸಿ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿದ್ದು, ಜನಸಾಮಾನ್ಯರು ತತ್ತರಿಸಿದ್ದಾರೆ. ಇದೇ ವೇಳೆ ಚಿಕನ್ ಹಾಗೂ ಮೊಟ್ಟೆ ದರ ಕೂಡ ಗಣನೀಯ ಏರಿಕೆ ಕಂಡಿದ್ದು, ಗ್ರಾಹಕರಿಗೆ ಬಿಸಿತುಪ್ಪವಾಗಿ ಪರಿಣಮಿಸಿದೆ.
ವಿದ್ಯುತ್ ಬಿಲ್, ಪೆಟ್ರೋಲ್, ಡೀಸೆಲ್, ತರಕಾರಿ, ದಿನಸಿ ಸೇರಿ ದಿನಬಳಕೆ ವಸ್ತುಗಳ ಬೆಲೆ ಏರಿಕೆಯಿಂದ ಜನ ಕಂಗಾಲಾಗಿದ್ದು, ಚಿಕನ್ ಮತ್ತು ಮೊಟ್ಟೆ ದರ ಏರಿಕೆಯಾಗಿ ಮಾಂಸ ಪ್ರಿಯರಿಗೂ ಶಾಕ್ ನೀಡಿದೆ.
ಬೇಸಿಗೆಯಲ್ಲಿ ಗರಿಷ್ಟ ತಾಪಮಾನದ ಪರಿಣಾಮ ಚಿಕನ್ ಮತ್ತು ಮೊಟ್ಟೆ ಉತ್ಪಾದನೆ ಕುಂಠಿತವಾಗಿ ದರ ಹೆಚ್ಚಳವಾಗಿದೆ. ಬಾಯ್ಲರ್ ಚಿಕನ್ ಪ್ರತಿ ಕೆಜಿಗೆ 260 ರೂಪಾಯಿವರೆಗೆ ಮಾರಾಟವಾಗುತ್ತಿದೆ. ಮೊಟ್ಟೆ ಒಂದಕ್ಕೆ 6.90 ರೂ, 7 ರೂ. ದರ ಇದೆ.
ಕಳೆದ ತಿಂಗಳು 160 ರಿಂದ 180 ರೂಪಾಯಿವರೆಗೆ ಚಿಕನ್ ಮಾರಾಟವಾಗುತ್ತಿತ್ತು. 5 ರೂ.ವರೆಗೆ ಮೊಟ್ಟೆ ದರ ಇತ್ತು. ಈಗ ಮೊಟ್ಟೆ ಮತ್ತು ಚಿಕನ್ ದರ ಭಾರಿ ಏರಿಕೆಯಾಗಿದೆ. ಕೋಳಿ ಫಾರಂಗಳಲ್ಲಿ ಪ್ರತಿ ಕೆಜಿಗೆ 140 ಗೆ ಚಿಕನ್ ಮಾರಾಟವಾಗುತ್ತಿದ್ದು, ರಿಟೇಲ್ ನಲ್ಲಿ 180 ರೂ. ವರೆಗೆ, ಗ್ರಾಹಕರಿಗೆ 250 -260 ರೂ.ವರೆಗೆ ಮಾರಾಟ ಮಾಡಲಾಗುತ್ತಿದೆ. ಕೋಳಿ ಫಾರಂಗಳಲ್ಲಿ ಮೊಟ್ಟೆ ದರ 6.60 ರೂ., ಹೋಲ್ ಸೇಲ್ ಅಂಗಡಿಗಳಲ್ಲಿ 6.80 ರೂ., ಚಿಲ್ಲರೆ ಅಂಗಡಿಗಳಲ್ಲಿ 7 ರೂ.ವರೆಗೆ ಮೊಟ್ಟೆ ಮಾರಾಟ ಮಾಡಲಾಗುತ್ತಿದೆ.